ಜಿಲ್ಲೆ

ರಸ್ತೆ ಬದಿಯ ಗಿಡ ಕಿತ್ತು ಹಾಕಿದ ಅಪರಿಚಿತರು

ನರಗುಂದ: ರಸ್ತೆ ಬದಿಯ 30ಕ್ಕೂ ಹೆಚ್ಚು ಗಿಡಗಳನ್ನು ಅಪರಿಚಿತರು ಜೆಸಿಬಿಯಿಂದ ಬುಡ ಸಮೇತ ಕಿತ್ತು ಹಾಕಿರುವ ಘಟನೆ ತಾಲೂಕಿನ ಕಲಕೇರಿಯ ದಂಡಿನ ದಾರಿಯಲ್ಲಿ ಗುರುವಾರ ನಡೆದಿದೆ.

ಕಳೆದ ನಾಲ್ಕು ವರ್ಷದ ಹಿಂದೆ ಸಾಮಾಜಿಕ ವಲಯ ಅರಣ್ಯ ಇಲಾಖೆಯಿಂದ ಗಿಡಗಳನ್ನು ನೆಡಲಾಗಿತ್ತು. ಕಲಕೇರಿಯಿಂದ ನವಲಗುಂದ ತಾಲೂಕಿನ ಅಮರಗೋಳಕ್ಕೆ ತೆರಳುವ ನೀರಾವರಿ ಮುಖ್ಯ ಕಾಲುವೆ ಪಕ್ಕದಲ್ಲಿನ 4 ಕಿಮೀ. ಉದ್ದದ ರಸ್ತೆಯ ಎರಡೂ ಬದಿ ವಿವಿಧ ಬಗೆಯ 600ಕ್ಕೂ ಅಧಿಕ ಸಸಿಗಳನ್ನು ನೆಡಲಾಗಿತ್ತು. ಕಾಲಕಾಲಕ್ಕೆ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಸಸಿಗಳಿಗೆ ನೀರುಣಿಸಿ, ಅವುಗಳ ಪಾಲನೆ-ಪೋಷಣೆ ಮೂಲಕ ಸಮೃದ್ಧವಾಗಿ ಬೆಳೆಸಿದ್ದರು.

ಆದರೆ, ರಸ್ತೆ ವಿಸ್ತರಣೆ ಕಾಮಗಾರಿ ನೆಪದಲ್ಲಿ 30ಕ್ಕೂ ಹೆಚ್ಚು ಗಿಡಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡದೆ ಸಂಪೂರ್ಣ ಕಿತ್ತು ಹಾಕಿದ್ದಾರೆ. ಸಾಲದೆಂಬಂತೆ ಗಿಡಗಳನ್ನು ದುಷ್ಕರ್ಮಿಗಳು ಟ್ರ್ಯಾಕ್ಟರ್‌ನಲ್ಲಿ ಹೊತ್ತೊಯ್ದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಸಾಮಾಜಿಕ ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಕುಂಬಾರ, ಕಲಕೇರಿಯ ದಂಡಿನ ರಸ್ತೆ ಬದಿಗಳಲ್ಲಿದ್ದ ಗಿಡಗಳನ್ನು ಕಿತ್ತು ಹಾಕಿರುವ ಮಾಹಿತಿ ಇಲಾಖೆ ಗಮನಕ್ಕೆ ಬಂದಿದೆ. ಆದರೆ, ಆರೋಪಿಗಳ ಬಂಧನಕ್ಕಾಗಿ ಎಫ್‌ಐಆರ್ ದಾಖಲಿಸುವ ಅಧಿಕಾರ ನಮಗಿಲ್ಲ. ಶುಕ್ರವಾರ ಬೆಳಗ್ಗೆ ವಲಯ ಅರಣ್ಯಾಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಲಾಗುವುದು. ರೈತರ ಜಮೀನಿನಲ್ಲಿ ನೆಟ್ಟಿರುವ ಗಿಡಗಳನ್ನು ಕಿತ್ತಿದ್ದರೆ ಒಂದಕ್ಕೆ ಹತ್ತು ಗಿಡಗಳನ್ನು ಅವರ ಸ್ವಂತ ಖರ್ಚಿನಲ್ಲಿಯೇ ನೆಡುವಂತೆ ಸೂಚಿಸುತ್ತೇವೆ. ಆಕಸ್ಮಾತ್ ಅರಣ್ಯ ಇಲಾಖೆ ವ್ಯಾಪ್ತಿಗೊಳಪಡುವ ಗಿಡಗಳನ್ನು ಕಿತ್ತಿದ್ದರೆ ಅಂತಹವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.