ಜಿಲ್ಲೆ

ಪ್ರಿಯಕರನಿಂದ ಮೋಸ, ಗರ್ಭಿಣಿ ಯುವತಿಯ ಪಾಡು

ಮಗು ಹಡೆದು ದತ್ತು ಕೇಂದ್ರಕ್ಕೆ ಒಪ್ಪಿಸಿದ ನೊಂದ ಸಂತ್ರಸ್ತೆ

ಜೀವ ಉಳಿಸಿ ದುರಂತ ತಪ್ಪಿಸಿದ ಉಡುಪಿಯ ವಿಶು ಶೆಟ್ಟಿ

ವಿಜಯವಾಣಿ ಸುದ್ದಿಜಾಲ ಉಡುಪಿ

ಪ್ರಿಯಕರನ ಪ್ರೀತಿ-ಪ್ರೇಮದ ಮೋಸದ ಬಲೆಯಿಂದ ಗರ್ಭಿಣಿಯಾಗಿ, ಪಡಬಾರದ ಕಷ್ಟ ಅನುಭವಿಸಿ, ಅನ್ಯ ರಾಜ್ಯದಿಂದ ಪಲಾಯನಗೈದು ಉಡುಪಿಗೆ ಬಂದಿದ್ದ ಯುವತಿಯೋರ್ವಳ ಹೀನಾಯ ಕಥೆಯಿದು.

ಯಾರ ಬಳಿಯೂ ತನಗಾದ ಮೋಸ ಹೇಳಿಕೊಳ್ಳಲಾಗದೆ ಉಡುಪಿ ಜಿಲ್ಲೆಯ ರಸ್ತೆ ಮಾರ್ಗವೊಂದರಲ್ಲಿ ಅಸಹಾಯಕಳಾಗಿ ನಿಂತಿದ್ದ ಯುವತಿಗೆ ಸಮಾಜ ಸೇವಕ ವಿಶು ಶೆಟ್ಟಿ ಆಸರೆಯಾದರು. ಎರಡೂ ಜೀವಕ್ಕೆ ಆಗುತ್ತಿದ್ದ ಅಪಾಯ, ದುರಂತ ತಪ್ಪಿಸಿ ಸಹೋದರತೆ ಮೆರೆದ ಘಟನೆಯಿದು.

ಘಟನೆ ಹಿನ್ನೆಲೆ

ದೇಶದ ಮಹಾ ನಗರವೊಂದರಲ್ಲಿ ಉದ್ಯೋಗಸ್ಥೆಯಾಗಿದ್ದ ಯುವತಿ ಪ್ರಿಯಕರನ ಮೋಸದಾಟಕ್ಕೆ ಗರ್ಭಿಣಿಯಾಗಿದ್ದಳು. ಪ್ರಿಯತಮೆ ಗರ್ಭಿಣಿ ಆಗಿದ್ದಾಳೆಂಬ ವಿಷಯ ತಿಳಿದ ಬಳಿಕ ಆತ ಕೈಕೊಟ್ಟಿದ್ದ. ಆದರೆ, ಮದುವೆಯಾಗದೆ ತಾನು ಗರ್ಭಿಣಿಯಾಗಿರುವುದು ಸಮಾಜಕ್ಕೆ, ಅಪ್ಪ-ಅಮ್ಮನಿಗೆ ತಿಳಿದರೆ ದೊಡ್ಡ ರಾದ್ಧಾಂತವೇ ನಡೆಯಬಹುದೆಂದು ಆಕೆ ತೀವ್ರ ಆತಂಕಕ್ಕೆ ಒಳಗಾಗಿದ್ದಳು. ದಿಕ್ಕುತೋಚದೆ ಗರ್ಭವತಿಯಾದ 8 ತಿಂಗಳ ಬಳಿಕ ಊರು ತೊರೆದು ಬಂದಿದ್ದಳು.

ಆಸ್ಪತ್ರೆಯಲ್ಲಿ ಹೆರಿಗೆ

ತನಗಾದ ಮೋಸ, ಅನ್ಯಾಯ ಯಾರಿಗೂ ತಿಳಿಸಲಾಗದೆ ಒದ್ದಾಡುತ್ತಿದ್ದ ಸಂದರ್ಭದಲ್ಲಿ ಆಪತ್ಬಾಂಧವ ವಿಶು ಶೆಟ್ಟಿ ಅಂಬಲಪಾಡಿ ಅವರ ಸಂಪರ್ಕವಾಯಿತು. ಅವರು ಸಾಂತ್ವನ ಕೇಂದ್ರದ ಮೂಲಕ ಯುವತಿಯೊಡನೆ ಸಮಾಲೋಚಿಸಿ, ಆಕೆಗೆ ಧೈರ್ಯ ತುಂಬಿ ಸಂಭವನೀಯ ದುರಂತ ತಪ್ಪಿಸಿದರು. ಒಂದು ತಿಂಗಳ ಕಾಲ ಆಕೆಗೆ ಆಶ್ರಯ ಒದಗಿಸಿ, ಆಸ್ಪತ್ರೆಯೊಂದರಲ್ಲಿ ಹೆರಿಗೆ ಮಾಡಿಸಲು ಕಾನೂನಾತ್ಮಕವಾಗಿ ವ್ಯವಸ್ಥೆ ಮಾಡಿದರು. ಆದರೆ, ಸಮಾಜ ಹಾಗೂ ಪಾಲಕರಿಗೆ ಹೆದರಿ ಹೆತ್ತ ಮಗುವನ್ನು ನೋಂದಾಯಿತ ದತ್ತು ಕೇಂದ್ರವೊಂದಕ್ಕೆ ಒಲ್ಲದ ಮನಸ್ಸಿನಿಂದ, ಬೇರೆ ದಾರಿಯಿಲ್ಲದೆ ನೀಡಿದ್ದಾಳೆ.

ಯುವತಿಯ ಸಂಕಟ

ಹೆತ್ತ ಮಗುವನ್ನು ದತ್ತು ಕೇಂದ್ರಕ್ಕೆ ನೀಡುವಾಗ ಯುವತಿ ಅನುಭವಿಸಿದ ಸಂಕಟ, ದು:ಖ, ಅಳು, ನೋಡಲಾಗುತ್ತಿರಲಿಲ್ಲ. 10 ದಿನ ಆಕೆ ಮಗವಿನೊಂದಿಗೆ ಇದ್ದು, ಕಾನೂನು ಪ್ರಕಾರ ದತ್ತು ಪ್ರಕ್ರಿಯೆ ನಡೆಸಲಾಗಿದೆ. ಯುವತಿಯ ಭವಿಷ್ಯದ ದೃಷ್ಟಿಯಿಂದ ಆಕೆಯ ಮಾನಕ್ಕೆ ಕುಂದು ಬಾರದಂತೆ ಗೌಪ್ಯವಾಗಿ ಕಾನೂನು ಪ್ರಕ್ರಿಯೆ ನಡೆಸಲಾಗಿದೆ. ಓರ್ವ ಸಹೋದರನಾಗಿ ಆಕೆಯ ಸಂಕಷ್ಟಕ್ಕೆ ನೆರವಾಗಿದ್ದೇನೆ. ಸಾಂತ್ವನ ಕೇಂದ್ರದ ಸಿಬ್ಬಂದಿಯ ನೆರವೂ ಸಹ ಸ್ಮರಣೀಯ ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.

ಪೊಲೀಸರಿಗೆ ದೂರು ನೀಡದ ತಾಯಿ

ತನ್ನ ಕರುಳ ಕುಡಿಯನ್ನು ದತ್ತು ಕೇಂದ್ರಕ್ಕೆ ಒಪ್ಪಿಸುವ ಸಂದರ್ಭದಲ್ಲಿ ಯುವತಿಯ ದು:ಖ, ಸಂಕಟ ಹೇಳತೀರದಾಗಿತ್ತು. ಇಂದಿನ ಪ್ರಜ್ಞಾವಂತ ಯುವತಿಯರು ಪ್ರೇಮದ ಮೋಹದಿಂದ ಮೋಸ ಹೋಗುತ್ತಿರುವುದು ಹೆಚ್ಚತೊಡಗಿದೆ. ಪ್ರೀತಿಸುವುದು ತಪ್ಪಲ್ಲ. ಆದರೆ, ದೈಹಿಕ ಸಂಬಂಧ ನಡೆಸಿದ ಪ್ರಿಯಕರ ಕೈಕೊಟ್ಟರೆ ಅದರ ದಷ್ಪರಿಣಾಮ ಯುವಕರಿಗಿಂತಲೂ ಯುವತಿಯರಿಗೇ ಹೆಚ್ಚು. ಅದಕ್ಕೆ ಈ ಯುವತಿಯ ಪ್ರಕರಣ ನಿದರ್ಶನ. ತನಗೆ ಮೋಸ ಮಾಡಿ ಇಂತಹ ಸಂದಿಗ್ಧ ಸ್ಥಿತಿ ತಂದಿಟ್ಟರೂ ಸಹ ಮೋಸ ಮಾಡಿದ ಪ್ರಿಯಕರನ ವಿರುದ್ಧ ಆಕೆ ಮರ್ಯಾದೆಗೆ ಅಂಜಿ ಪೊಲೀಸರಿಗೆ ದೂರು ಕೊಟ್ಟಿಲ್ಲ. ಏಕೆಂದರೆ, ಈ ವಿಷಯ ಸಮಾಜಕ್ಕೆ ತಿಳಿದರೆ ತನ್ನ ಭವಿಷ್ಯ ಇನ್ನೂ ಹಾಳಾಗಬಹುದು. ಕುಟುಂಬದ ಮರ್ಯಾದೆ ಬೀದಿ ಪಾಲಾಗಬಹುದು. ಅಥವಾ ಅವಮಾನ ತಾಳಲಾರದೆ ಹೆತ್ತವರು ಆತ್ಮಹತ್ಯೆಗೂ ಶರಣಾಗಬಹುದು. ಹೀಗಾಗಿ ಪೊಲೀಸರಿಗೆ ದೂರು ನೀಡಲ್ಲ ಎಂದು ನೊಂದ ಸಂತ್ರಸ್ತೆ ತಿಳಿಸಿದ್ದಾಳೆ.
ಯಾರಿಗೂ ಇಂತಹ ಸ್ಥಿತಿ ಬರಬಾರದು. ತಾಯಿಗೆ ಮಗುವನ್ನು ಕಳೆದುಕೊಂಡ ನೋವು ಜೀವನವಿಡೀ ಕಾಡುತ್ತದೆ. ಹೆಣ್ಮಕ್ಕಳು ಜಾಗರೂಕರಾಗಿರಬೇಕು. ಪಾಲಕರೂ ಸಹ ದೂರದ ಊರಲ್ಲಿ ಮಗಳು ಉದ್ಯೋಗದಲ್ಲಿದ್ದಾಳೆಂದು ಅಥವಾ ಆಕೆ ಕಳುಹಿಸಿದ ಹಣ ಬರುತ್ತಿದೆ ಎಂದು ಸುಮ್ಮನಿರುವುದಲ್ಲ. ಆಕೆಯ ಬದುಕು ಅಲ್ಲಿ ಹೇಗೆ ನಡೆಯುತ್ತಿದೆ ಎಂಬ ಬಗ್ಗೆಯೂ ನಿಗಾ ಇಡಸಬೇಕು. ಇಲ್ಲವಾದಲ್ಲಿ ಇಂತಹ ದುರಂತ ಸಂಭವಿಸುತ್ತವೆ. | ವಿಶು ಶೆಟ್ಟಿ. ಸಮಾಜ ಸೇವಕ