ಜಿಲ್ಲೆ

ಜಿಲ್ಲೆಗೆ ಮತ್ತೆ ತಟ್ಟಿದ ಚಂಡಮಾರುತ ಎಫೆಕ್ಟ್

ಕೋಲಾರ ಡೆಸ್ಕ್

ಜಿಟಿಜಿಟಿ ಮಳೆಗೆ ಸಾರ್ವಜನಿಕರು ಹೈರಾಣ | ಬಿಡುವಿಲ್ಲದೆ ಸುರಿದ ಮಳೆರಾಯ | ಅಪಾರ ಪ್ರಮಾಣದ ಬೆಳೆ ಹಾನಿ

ಕೋಲಾರ : ನಗರ ಸೇರಿ ಜಿಲ್ಲಾದ್ಯಂತ ಗುರುವಾರ ಬೆಳಗ್ಗೆಯಿಂದ ಸುರಿದ ಜಟಿ ಜಿಟಿ ಮಳೆಗೆ ಜನ ಹೈರಾಣಾದರು.

ಕಳೆದ ವಾರ ಸುರಿದ ಫೆಂಗಲ್​ ಚಂಡಮಾರುತದಿಂದ ಚೇತರಿಸಿಕೊಳ್ಳುವಷ್ಟರಲ್ಲಿ ರೈತರಿಗೆ ಮತ್ತೆ ಮಳೆ ಎದುರಾಗಿದ್ದು, ಗುರುವಾರ ಬೆಳಗ್ಗೆ 9.30ಕ್ಕೆ ಶುರುವಾದ ಮಳೆ ಆಗಾಗ ಬಿಡುವು ಕೊಟ್ಟು ಧಬೋ ಎಂದು ಸುರಿಯಿತು. ಇದರಿಂದ ಜನ ಜೀವನವೂ ಅಸ್ತವ್ಯಸ್ಥಗೊಂಡಿತು.

ಸರ್ಕಾರಿ ಕಚೇರಿ, ಕಾರ್ಖಾನೆಗಳು, ಅಂಗಡಿ ಮಳಿಗೆಗಳಿಗೆ ತೆರಳಬೇಕಿದ್ದವರು ಮಳೆಯಿಂದ ಪರದಾಡಬೇಕಾಯಿತು. ಆಸ್ಪತ್ರೆ ಕೆಲಸಕ್ಕೆ ಹೋಗಬೇಕಿದ್ದವರು ಆಟೋಗಳಲ್ಲಿ ತೆರಳಿದ್ದು ಕಂಡು ಬಂದಿತು.

ಮತ್ತೊಂದೆಡೆ ವರುಣ ದೇವ ರೈತರಿಗೆ ಕಣ್ಣೀರು ತರಿಸಿದ್ದು, ಟೊಮ್ಯಾಟೊ, ಕೋಸು, ಬೀನ್ಸ್​, ದಪ್ಪ ಮೆಣಸಿನಕಾಯಿ, ಆಲೂಗಡ್ಡೆ ಸೇರಿ ಲಕ್ಷಾಂತರ ರೂ. ಮೌಲ್ಯದ ಬೆಳೆಗಳು ಮಳೆಗೆ ನೆಲಕಚ್ಚಿವೆ. ಕೊಯ್ಲಿಗೆ ಬಂದಿದ್ದ ರಾಗಿ ಬೆಳೆಯು ಮಳೆಯ ತೀವ್ರತೆಗೆ ನೆಲಕ್ಕೆ ಉರುಳುವ ಭೀತಿ ಎದುರಾಗಿದೆ.

ಮಳೆಯಿಂದಾಗಿ ಚರಂಡಿ ಹಾಗೂ ಮ್ಯಾನ್​ಹೋಲ್​ಗಳು ಭರ್ತಿಯಾಗಿ ಕೊಳಚೆ ನೀರು ರಸ್ತೆಗಳ ಮೇಲೆ ಹರಿಯಿತು.

ಚರಂಡಿ, ರಾಜಕಾಲುವೆ, ಉದ್ಯಾನ, ಮೈದಾನಗಳಲ್ಲಿ ನೀರು ನಿಂತಿತ್ತು. ತಗ್ಗು ಪ್ರದೇಶದ ಹಲವು ಬಡಾವಣೆ, ಚರಂಡಿಗಳಲ್ಲಿ ದೊಡ್ಡ ಮಟ್ಟದಲ್ಲಿ ನೀರು ಹರಿಯುತ್ತಿದ್ದರಿಂದ ಮನೆಗಳೊಳಗೆ ನುಗ್ಗುವ ಆತಂಕ ಎದುರಾಗಿತ್ತು. ಚರಂಡಿ, ರಾಜಕಾಲುವೆಗಳಲ್ಲಿ ಕಸ ಕಟ್ಟಿಕೊಂಡಿದ್ದರಿಂದ ನೀರಿನ ಹರಿವಿಗೆ ಅಡ್ಡಿಯಾಗಿ ಅಕ್ಕಪಕ್ಕದ ಮನೆಗಳಿಗೆ ನುಗ್ಗಿದೆ. ಮಧ್ಯಾಹ್ನ ಆಗುತ್ತಿದ್ದಂತೆ ಮಳೆ ತೀವ್ರಗೊಳ್ಳುತ್ತಿತ್ತು, ಕೆಲ ಬಡಾವಣೆಗಳಲ್ಲಿ ವಿದ್ಯುತ್​ ಸಂಪರ್ಕ ಕಡಿತಗೊಂಡು ಪರದಾಡುವಂತಾಯಿತು.

ನಗರದ ಗೌರಿಪೇಟೆ ಮುಖ್ಯ ರಸ್ತೆ ಅಭಿವೃದ್ಧಿಪಡಿಸಲು ಹಗೆದು ಸುಮಾರು ದಿನಗಳೇ ಕಳೆದಿದ್ದು, ಇದೀಗ ಮಳೆ ಆಗಿರುವುದರಿಂದ ವಾಹನ ಸವಾರರು ಓಡಾಡಲು ಯೋಗ್ಯವಿಲ್ಲದಂತಾಗಿದೆ. ಇದೇ ರಸ್ತೆಯಲ್ಲಿ ಯುಜಿಡಿ ಮ್ಯಾನ್​ಹೋಲ್​ ಹಾನಿಯಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಾಗಿದೆ. ನಗರಸಭೆ ಸದಸ್ಯರು, ಅಧಿಕಾರಿಗಳು ಇದೇ ಮಾರ್ಗದಲ್ಲೇ ಓಡಾಡುತ್ತಿದ್ದರೂ ಸಹ ಕಣ್ಣಿಗೆ ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ನಗರದ ರಹಮತ್​ ನಗರ, ಶಹಿನ್​ ಷಾ ನಗರ, ಆರ್​ಜಿ ಬಡಾವಣೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ, ಪಿಸಿ ಬಡಾವಣೆ, ಜಯನಗರ ಬಡಾವಣೆಗಳಲ್ಲಿ ಪೈಪ್​ ಲೈನ್​ ಕೆಲಸ ನಡೆಯುತ್ತಿದ್ದು, ಮಳೆಯಿಂದ ಕೆಲಸ ಸ್ಥಗಿತಗೊಂಡಿದೆ. ಇದರಿಂದ ಜನ ತೀವ್ರ ಸಮಸ್ಯೆ ಎದುರಿಸಬೇಕಾಯಿತು.

 ರಸ್ತೆಗೆ ಹರಿದ ತ್ಯಾಜ್ಯ

ಬಿಡುವುಕೊಡದೆ ಮಳೆ ಸುರಿಯುತ್ತಿದ್ದ ಪರಿಣಾಮ ರಸ್ತೆಗಳೆಲ್ಲ ಜಲಾವೃತಗೊಂಡಿದ್ದವು. ಸಂಚಾರಿ ಪೊಲೀಸ್​ ಠಾಣೆ ಸಮೀಪ, ಅಂತರಗಂಗೆ ರಸ್ತೆಯಲ್ಲಿ ಚರಂಡಿ ವ್ಯವಸ್ಥೆಯು ಸಮರ್ಪಕವಾಗಿಲ್ಲ. ಇದರಿಂದ ತ್ಯಾಜ್ಯ ನೀರೆಲ್ಲ ರಸ್ತೆಗೆ ಹರಿಯಿತು. ಯುಜಿಡಿಗೆ ಹೋಟೆಲ್​ಗಳ, ಮಾಂಸದ ಅಂಗಡಿಗಳ ತ್ಯಾಜ್ಯ ಬಿಡಲಾಗುತ್ತಿದ್ದು, ಮಳೆ ನೀರು ಸರಾಗವಾಗಿ ಹರಿದು ಹೋಗಲು ಅವಕಾಶವಿಲ್ಲದ ತ್ಯಾಜ್ಯ ನೀರು ರಸ್ತೆಯಲ್ಲೇ ನಿಲ್ಲುವಂತಾಯಿತು.

 ರಾಗಿ ಕಟಾವಿಗೆ ಅಡ್ಡಿ

ರಾಗಿ ಬೆಳೆಯು ಕಟಾವಿಗೆ ಬಂದಿದ್ದು, ಜಿಲ್ಲೆಯಲ್ಲಿ ಕಾರ್ಯ ಪ್ರಾರಂಭವಾಗಿದೆ. ಕಳೆದ ವಾರ ೆಂಗಲ್​ ಚಂಡಮಾರುತದಿಂದ ಬೇಸತ್ತಿದ್ದ ರೈತರಿಗೆ ಗುರುವಾರ ಸುರಿದ ಮಳೆಯು ತೀವ್ರ ಆತಂಕ ಮೂಡಿಸಿದೆ. ಸಮೃದ್ಧವಾಗಿ ಬೆಳೆ ಬೆಳೆದು ನಿಂತಿದ್ದು ಕಟಾವು ಮಾಡಲು ಅಡ್ಡಿ ಉಂಟು ಮಾಡಿದೆ. ಕೊಯ್ಲಿಗೆ ಬಂದಿರುವ ರಾಗಿ ತೆನೆಯೂ ಮಳೆಗೆ ನೆನೆದು ನೆಲಕಚ್ಚುತ್ತದೆ. ಕೂಡಲೇ ಬಿಸಿಲು ಬಾರದಿದ್ದರೆ ತೆನೆಯಲ್ಲೇ ಮೊಳಕೆ ಹೊಡೆದು ಸಂಪೂರ್ಣ ಹಾನಿಯಾಗುತ್ತದೆ. ಇದರಿಂದಾಗಿ ರೈತರು ತೀವ್ರ ಆತಂಕಕ್ಕೆ ಒಳಗಾಗಿದೆ.

ಮಕ್ಕಳ ಮೇಲೂ ಪರಿಣಾಮ

ಬೆಳಗ್ಗೆ 9.30ರ ನಂತರ ಮಳೆ ಸುರಿಯಿತು, ಇದಕ್ಕೂ ಮುಂಚೆ ಶಾಲಾ&ಕಾಲೇಜು ವಿದ್ಯಾರ್ಥಿಗಳು ತರಗತಿಗಳಿಗೆ ತೆರಳಿದ್ದರು. ಶಾಲೆಯಿಂದ ಮನೆಗೆ ಮಳೆಯಲ್ಲಿ ನೆನೆದುಕೊಂಡು ವಾಪಸ್​ ಬಂದಿದ್ದು ಕಂಡುಬಂದಿತು. ಪಾಲಕರು ದ್ವಿಚಕ್ರವಾಹನ, ಕಾರುಗಳಲ್ಲಿ ಮಕ್ಕಳು ಬರುವತನಕ ಕಾಯುತ್ತಿದ್ದರು. ವಾಹನ ವ್ಯವಸ್ಥೆ ಇಲ್ಲದ ಪಾಲಕರು ಛತ್ರಿಗಳನ್ನು ಹಿಡಿದು ನಿಂತಿದ್ದರು. ಮಳೆಯ ಪರಿಣಾಮ ಮಕ್ಕಳ ಮೇಲೂ ಬೀರುವಂತಾಯಿತು.