ಮಡಿಕೇರಿ: ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ವಿರುದ್ಧ ಸಚಿವ ಅಶ್ವಥ ನಾರಾಯಣರವರು ನೀಡಿರುವ ಹೇಳಿಕೆ ಖಂಡನೀಯವೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಂ.ಎ.ಉಸ್ಮಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಿದ್ದರಾಮಯ್ಯರ ಕುರಿತು ಸಚಿವರು ನೀಡಿರುವ ಪ್ರಚೋದನಾಕಾರಿ ಹೇಳಿಕೆ ಬಿಜೆಪಿಯ ಹೊಡಿ, ಬಡಿ ಸಂಸ್ಕೃತಿಯನ್ನು ಪ್ರತಿಬಿಂಬಿಸಿದೆ. ರಾಜಕೀಯ ಲಾಭಕ್ಕಾಗಿ ಇತಿಹಾಸವನ್ನು ಕೆಣಕಿ ಕ್ಷುಲ್ಲಕ ರಾಜಕಾರಣವನ್ನು ಮಾಡಲಾಗುತ್ತಿದೆ. ದೇಶದ ಭವಿಷ್ಯಕ್ಕೆ ಏನು ಬೇಕು ಎಂದು ಚಿಂತನೆ ಮಾಡದೆ ಆಗಿ ಹೋದ ಘಟನಾವಳಿಗಳನ್ನು ತಿರುಚಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲಾಗುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಇರುವ ಜನಪ್ರಿಯತೆಯನ್ನು ಸಹಿಸಲಾಗದೆ ಸೋಲಿನ ಹತಾಶೆಯಲ್ಲಿರುವ ಬಿಜೆಪಿ ಮುಖಂಡರು ಬಾಲಿಶ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಚಿವ ಅಶ್ವಥ ನಾರಾಯಣ ಅವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.