ಮಡಿಕೇರಿ: ದೇಶದ ಪ್ರಥಮ ಪ್ರಜೆಯಾಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕುರಿತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ನೀಡಿರುವ ಬಡಪಾಯಿ ಮಹಿಳೆ ಎಂಬ ಹೇಳಿಕೆ ಖಂಡನೀಯ ಮತ್ತು ಇದು ಬುಡಕಟ್ಟು ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ ಎಂದು ಕೊಡಗು ಜಿಲ್ಲಾ ಬಿಜೆಪಿಯ ಎಸ್‌ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪರಿಶಿಷ್ಟರ ಮತಬ್ಯಾಂಕ್‌ನಿಂದ ಶ್ರೀಮಂತ ರಾಜಕಾರಣ ಮಾಡಿ ದೇಶದ ಎಲ್ಲಾ ಅಧಿಕಾರವನ್ನು ಅನುಭವಿಸಿದ ಕಾಂಗ್ರೆಸ್ಸಿಗರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ಆರಂಭಗೊಂಡು ಇಲ್ಲಿಯವರೆಗೆ ಪರಿಶಿಷ್ಟ ಸಮುದಾಯವನ್ನು ಅಪಮಾನಿಸುತ್ತಲೇ ಬಂದಿದೆ. ಕಾಂಗ್ರೆಸ್ ಪಕ್ಷ ಪರಿಶಿಷ್ಟರನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ರಾಷ್ಟ್ರಪತಿಗಳ ಕುರಿತು ಸೋನಿಯಾಗಾಂಧಿ ಅವರು ನೀಡಿರುವ ಕೀಳು ಅಭಿರುಚಿಯ ಹೇಳಿಕೆಯೇ ಸಾಕ್ಷಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ಸಿಗರ ಮತಬ್ಯಾಂಕ್ ರಾಜಕಾರಣದ ಬಣ್ಣ ಬಯಲಾಗುತ್ತಿದ್ದು, ಪರಿಶಿಷ್ಟರು ಜಾಗೃತರಾಗುತ್ತಿದ್ದಾರೆ. ದೇಶದ ಉನ್ನತ ಹುದ್ದೆಯನ್ನು ಶ್ರೀಮಂತರು ಹಾಗೂ ಮೇಲ್ವರ್ಗದವರು ಮಾತ್ರ ಅಲಂಕರಿಸಬೇಕೆ, ಪರಿಶಿಷ್ಟರು ಅಥವಾ ಬಡವರು ಅಧಿಕಾರದಲ್ಲಿ ಇರಬಾರದೇ ಎಂದು ಪ್ರಶ್ನಿಸಿದ್ದಾರೆ.
ಸೋನಿಯಾಗಾಂಧಿ ಅವರ ಹೇಳಿಕೆಯನ್ನು ಇಡೀ ದೇಶವೇ ವಿರೋಧಿಸುತ್ತಿದೆ. ಕಾಂಗ್ರೆಸ್ ಪಕ್ಷ ತಕ್ಷಣ ಬುಡಕಟ್ಟು ಸಮುದಾಯ ಹಾಗೂ ದೇಶದ ಜನರ ಕ್ಷಮೆಯಾಚಿಸಬೇಕೆಂದು ಎಂ.ಎಂ.ಪರಮೇಶ್ವರ್ ಒತ್ತಾಯಿಸಿದ್ದಾರೆ.
ಖರ್ಗೆ ಹೇಳಿಕೆ ಖಂಡನೀಯ: ಮಹಾಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡುವುದು ಹಿಂದೂ ಧಾರ್ಮಿಕ ನಂಬಿಕೆಯಾಗಿದೆ. ಆದರೆ, ಈ ನಂಬಿಕೆಯನ್ನೇ ಅವಮಾನಿಸುವ ರೀತಿಯಲ್ಲಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ಬಡತನ ನಿರ್ಮೂಲನೆಯಾಗುತ್ತದೆಯೇ, ಹಸಿದವರಿಗೆ ಆಹಾರ, ಯುವಕರಿಗೆ ಉದ್ಯೋಗ ಸಿಗುತ್ತದೆಯೇ ಎಂದೆಲ್ಲಾ ಪ್ರಶ್ನೆ ಮಾಡಿದ್ದಾರೆ. ಇದು ಹಿಂದೂಗಳ ಭಾವನೆಗೆ ದಕ್ಕೆ ತಂದ ಹೇಳಿಕೆಯಾಗಿತ್ತು ಇದನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ.