ಕಾರ್ಕಳ: ಸಂವಿಧಾನಕ್ಕೆ ವಿರುದ್ಧವಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮುಸ್ಲಿಂ ಮೀಸಲಾತಿಯನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಸಂವಿಧಾನ ಬದಲಾಯಿಸುತ್ತೇವೆ ಎಂದು ಮಾತನಾಡಿರುವುದು ದುರಾದೃಷ್ಟಕರ ಎಂದು ಮಾಜಿ ಸಚಿವ ವಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ಸಂವಿಧಾನ ಬದಲಾಯಿಸಲು ಹೊರಟರೆ ರಕ್ತಪಾತವಾಗುತ್ತದೆ ಎಂದು ಈ ಹಿಂದೆ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಹಿಂದುಳಿದ ವರ್ಗ, ದಲಿತ ಸಮುದಾಯಕ್ಕೆ ಶಾಶ್ವತ ಅನ್ಯಾಯ ಮಾಡುವ ನಿರ್ಧಾರ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ. ಹಿಂದುಳಿದ ವರ್ಗಕ್ಕೆ ನ್ಯಾಯಬದ್ಧವಾಗಿ ಸಿಗಬೇಕಿದ್ದ ಮೀಸಲನ್ನು ಮುಸ್ಲಿಮರಿಗೆ ವರ್ಗಾಯಿಸುತ್ತಿರುವ ನಿಮ್ಮ ಮತ ಬ್ಯಾಂಕ್ ರಾಜಕಾರಣದ ವಿರುದ್ಧ ಬಿಜೆಪಿ ಹೋರಾಟ ರೂಪಿಸುತ್ತದೆ. ಕಾಂಗ್ರೆಸ್ ಎಂದರೆ ಓಬಿಸಿ- ದಲಿತ ವಿರೋಧಿ, ಕಾಂಗ್ರೆಸ್ ಹಿಂದು ವಿರೋಧಿ, ಕಾಂಗ್ರೆಸ್ ಎಂದರೆ ಸಂವಿಧಾನ ವಿರೋಧಿ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ 18 ಶಾಸಕರನ್ನು ಅಮಾನತು ಪೂರ್ವಯೋಜಿತ ಎಂಬ ಅನುಮಾನ ಬರುತ್ತಿದೆ. ಏಕೆಂದರೆ ಅಧಿವೇಶನ ಪ್ರಾರಂಭವಾದ ನಂತರದ ವಾರದಲ್ಲಿ ಅವರು ಬಿಜೆಪಿ ಶಾಸಕರಿಗೆ ಎತ್ತಿ ಬಿಸಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಇದು ಪೂರ್ವಯೋಜಿತ ಎಂಬ ಅನುಮಾನ ಬರುತ್ತಿದೆ. ತಕ್ಷಣ ಈ ಅಮಾನತು ಆದೇಶ ವಾಪಸ್ ತೆಗೆದುಕೊಳ್ಳಬೇಕೆಂದು ನಾನು ಮನವಿ ಮಾಡುತ್ತೇನೆ ಎಂದು ಒತ್ತಾಯಿಸಿದ್ದಾರೆ.