ಬೇಲೂರು ತಾಲೂಕಿನ ಶಿವಾಲದಹಳ್ಳಿಯಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ಕನಕ ಗುರುಪೀಠದ ಶ್ರೀ ಡಾ.ಶಿವಾನಂದಪುರಿ ಸ್ವಾಮೀಜಿ ಉದ್ಘಾಟಿಸಿದರು. 
ಜಿಲ್ಲೆ

ಹಿಂದುಳಿದವರ ಧ್ವನಿಯಾಗಿರುವ ರಾಜ್ಯ ಸರ್ಕಾರ

ಬೇಲೂರು: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಸರ್ವತೋಮುಖ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಶ್ರಮಿಸುತ್ತಿದ್ದು, ಮುಂದಿನ ಹತ್ತು ವರ್ಷಗಳ ಕಾಲ ಇದೇ ಸರ್ಕಾರ ರಾಜ್ಯವನ್ನು ಆಳಲಿ ಎಂದು ಕೆ.ಆರ್.ನಗರ ಶ್ರೀ ಕನಕಗುರು ಪೀಠದ ಶ್ರೀ ಡಾ.ಶಿವಾನಂದಪುರಿ ಸ್ವಾಮೀಜಿ ಆಶಿಸಿದರು.

ತಾಲೂಕಿನ ಶಿವಾಲದಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಬನಶಂಕರಿ ದೇಗುಲ ಉದ್ಘಾಟಿಸಿ ಮಾತನಾಡಿದರು.

ಕುರುಬ ಸಮಾಜದಲ್ಲಿ ಜನ್ಮ ತಾಳಿದ ಸಿದ್ದರಾಮಯ್ಯ ರಾಜಕೀಯದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡರೂ ಎರಡು ಬಾರಿ ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಅಭಿವೃದ್ಧಿಗೆ ಐದು ಗ್ಯಾರಂಟಿ ಯೋಜನೆ ನೀಡುವ ಮೂಲಕ ಡಿ.ದೇವರಾಜ ಅರಸು ನಂತರ ಒಂದು ಅವಧಿಗೆ ಪೂರ್ಣ ಪ್ರಮಾಣದಲ್ಲಿ ಅಧಿಕಾರ ನಡೆಸಿ ಎರಡನೇ ಬಾರಿಗೆ ಅಧಿಕಾರ ಹಿಡಿದರು. ಉತ್ತಮ ಆಡಳಿತ ನಡೆಸಿದರೂ ಕೆಲವರು ಅಧಿಕಾರದಿಂದ ಇಳಿಸಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಇನ್ನೂ ಹತ್ತು ವರ್ಷಗಳ ಕಾಲ ರಾಜ್ಯದಲ್ಲಿ ಆಡಳಿತ ನಡೆಸುವರು ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಸಮುದಾಯದ ಸಂಘಟನೆಗೆ ಪ್ರಾಮುಖ್ಯ ನೀಡಬೇಕು. ದೇಗುಲ ನಿರ್ಮಿಸಿದರೆ ಸಾಲದು, ಅದರ ನಿರ್ವಹಣೆ ಮುಖ್ಯ. ಪ್ರತಿಯೊಂದು ಗ್ರಾಮದಲ್ಲೂ ಊರಿಗೊಂದು ದೇಗುಲ ಕಟ್ಟಬೇಕು ಎಂಬ ಮನೋಭಾವನೆ ಬರುತ್ತಿದೆ. ಶಿವಾಲದಹಳ್ಳಿ ಗ್ರಾಮದಲ್ಲಿ ವಿದ್ಯಾವಂತರಿದ್ದು, ಹೆಚ್ಚು ಉದ್ಯೋಗಿಗಳಿದ್ದರೂ, ಇನ್ನೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಬೇಲೂರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಕೆಲಸ ಮಾಡಿರುವೆ. ನಮಗೆ ವೋಟು ನೀಡಿದ ಗ್ರಾಮಗಳಿಗೆ ಹತ್ತಾರು ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿರುವೆ. ಸುಮಾರು 1,800 ಕೋಟಿ ರೂ. ಅನುದಾನದಲ್ಲಿ ಕೆಲಸ ಮಾಡಿಸಿದ್ದರೂ ಕ್ಷೇತ್ರದ ಜನತೆ ನನ್ನನ್ನು ಸೋಲಿಸಿದ್ದು ಬೇಸರದ ಸಂಗತಿ ಎಂದರು.

ಉದ್ಯಮಿ ಗ್ರಾನೈಟ್ ರಾಜಶೇಖರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಪಟೇಲ್ ಶಿವಪ್ಪ, ಪೊಲೀಸ್ ಇನ್ಸ್‌ಪೆಕ್ಟರ್ ರೇವಣ್ಣ, ಪಿಎಸ್‌ಐ ಶಿವನಾಂದ ಪಾಟೀಲ್, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಗ್ರಾಪಂ ಮಾಜಿ ಅಧ್ಯಕ್ಷರಾದ ನಾಗರಾಜ್, ಹಾಲಪ್ಪ, ಪುರಸಭೆ ಮಾಜಿ ಬಿ.ಎಲ್.ಧರ್ಮೇಗೌಡ, ದೇಗುಲ ಟ್ರಸ್ಟ್ ಅಧ್ಯಕ್ಷ ಬನವೇಗೌಡ, ಮುಖಂಡರಾದ ರಂಗನಾಥ, ಹರೀಶ್, ಕಮಲಮ್ಮ, ಪುಟ್ಟಸ್ವಾಮಿ, ಗ್ರಂಥಪಾಲಕ ಮಂಜೇಗೌಡ, ದೇವರಾಜ್, ಜಗದೀಶ್, ತೀರ್ಥೇಗೌಡ, ಸದಸ್ಯ ಗೋಪಾಲ್, ಪಿಡಿಒ ಅವಿನಾಶ್ ಇತರರಿದ್ದರು.