ಪಾಂಡವಪುರ ಪಟ್ಟಣದಲ್ಲಿ ಆಯೋಜಿಸಿದ್ದ ಮೈಸೂರು ಚಲೋ ಪಾದಯಾತ್ರೆ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಗದ್ದೆ ನಾಟಿ ಕಾರ್ಯಕ್ರಮದ ಅಂಗವಾಗಿ ಆಯೋಜಿಸದ್ದ ಪೂರ್ವಭಾವಿ ಸಭೆಯನ್ನು ಸಿ.ಎಸ್.ಪುಟ್ಟರಾಜು ಉದ್ಘಾಟಿಸಿದರು. ಎಸ್.ಎ.ಮಲ್ಲೇಶ್, ಸಿ.ಅಶೋಕ್, ಡಿ.ಶ್ರೀನಿವಾಸ್, ಸತೀಶ್ ಇದ್ದರು. 
ಜಿಲ್ಲೆ

ಭ್ರಷ್ಟಾಚಾರದಲ್ಲಿ ಮುಳುಗಿದೆ ರಾಜ್ಯ ಸರ್ಕಾರ

ಶಿವಶಂಕರ್ ಎಂ. ಹೆಬ್ಬಳ್ಳ

ಪಾಂಡವಪುರ :ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ, ಮುಡಾ ನಿವೇಶನ ಹಂಚಿಕೆ ಪ್ರಕರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಆಗ್ರಹಿಸಿದರು.

ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಮೈಸೂರು ಚಲೋ ಪಾದಯಾತ್ರೆ ಹಾಗೂ ಎಚ್.ಡಿ.ಕುಮಾರಸ್ವಾಮಿ ಆ.11ರ ಗದ್ದೆ ನಾಟಿ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರ ಪೂರ್ವಭಾವಿ ಉದ್ಘಾಟಿಸಿ ಮಾತನಾಡಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣದಲ್ಲಿ 187 ಕೋಟಿ ರೂ. ಭ್ರಷ್ಟಾಚಾರವಾಗಿದೆ ಎಂಬುದು ವಿಪಕ್ಷಗಳು ಆರೋಪಿಸಿದರೆ, ಇಲ್ಲ ವಾಲ್ಮೀಕಿ ನಿಗಮದಲ್ಲಿ ಬರೀ 87 ಕೋಟಿ ಭ್ರಷ್ಟಚಾರವಾಗಿದೆ ಎಂಬುದಾಗಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದಾರೆ. ಅಲ್ಲದೆ ಪೊಲೀಸ್ ವರ್ಗಾವಣೆ ದಂಧೆ ಸೇರಿದಂತೆ ಈ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇಂತಹ ಭ್ರಷ್ಟ ಸರ್ಕಾರವನ್ನು ರಾಜ್ಯದ ಜನತೆ ತಿರಸ್ಕರಿಸಲಿದ್ದಾರೆ ಎಂದು ಹೇಳಿದರು.

ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರಿಂದ ಮೈಸೂರು ಚಲೋ ಪಾದಯಾತ್ರೆ ನಡೆಸುತ್ತಿದ್ದು, ಪಾದಯಾತ್ರೆಯಲ್ಲಿ ಎರಡು ಪಕ್ಷದ ಹಲವಾರು ನಾಯಕರು ಸೇರಿದಂತೆ ಸಾವಿರಾರು ಜನ ಭಾಗವಹಿಸಿ ಯಾತ್ರೆಯ ಯಶಸ್ಸಿಗೆ ಸಹಕಾರ ನೀಡುತ್ತಿದ್ದಾರೆ. ಪಾದಯಾತ್ರೆಯಲ್ಲಿ 10 ಕಿಮೀಗೆ ಒಂದು ವಿಧಾನಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ. ಮದ್ದೂರು, ಮಂಡ್ಯದ ಬಳಿಕ ಗುರುವಾರ ಬೆಳಗ್ಗೆ ತೂಬಿನಕೆರೆ ಕೈಗಾರಿಕೆ ಪ್ರದೇಶದ ತಲುಪಲಿದ್ದು, ಅಲ್ಲಿಂದ ಹೊರಡುವ ಪಾದಯಾತ್ರೆಯ ಜವಾಬ್ದಾರಿಯನ್ನು ಮೇಲುಕೋಟೆ ವಿಧಾನಸಭಾ ಕ್ಷೇತ್ರಕ್ಕೆ ನೀಡಲಾಗಿದೆ. ಅಂದು ಕ್ಷೇತ್ರದ ಎರಡು ಪಕ್ಷಗಳ ಕಾರ್ಯಕರ್ತರು ಸೇರಿ 10 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಅದಕ್ಕಾಗಿ ಬಸ್‌ಗಳ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದು ತಿಳಿಸಿದರು.

ಆ.11ಕ್ಕೆ ಭತ್ತನಾಟಿ: ಎಚ್.ಡಿ.ಕುಮಾರಸ್ವಾಮಿ ಅವರು ಗೆದ್ದು ಕೆಂದ್ರ ಮಂತ್ರಿಯಾದ ಬಳಿಕ ಉತ್ತಮ ಮಳೆಯಾಗಿ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ. ಹೀಗಾಗಿ ಆ.11ರಂದು ತಾಲೂಕಿನ ಅರಳಕುಪ್ಪೆ-ಸೀತಾಪುರ ಗ್ರಾಮ ವ್ಯಾಪ್ತಿಯ ಕಾವೇರಿ ತಟದಲ್ಲಿರುವ ಅರಳಕುಪ್ಪೆ ಗ್ರಾಮದ ಲಕ್ಷ್ಮಣ ಎಂಬುವವರ ಜಮೀನಿನಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರಿಂದ ಗದ್ದೆ ನಾಟಿ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಎಚ್.ಡಿ.ಕುಮಾರಸ್ವಾಮಿ ಅವರು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ, ಬಳಿಕ ಭತ್ತದ ನಾಟಿಗೆ ಚಾಲನೆ ನೀಡಲಿದ್ದಾರೆ. ಹಾಗಾಗಿ ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಕಾರ್ಯಕರ್ತರು ಭಾಗವಹಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್, ಜಿ.ಪಂ. ಮಾಜಿ ಸದಸ್ಯರಾದ ಸಿ.ಅಶೋಕ್, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ಮಾಜಿ ಅಧ್ಯಕ್ಷ ಸತೀಶ್, ಮುಖಂಡರಾದ ಲಿಂಗರಾಜು(ಗುಣ), ದೇವಪ್ಪ ಇತರರು ಇದ್ದರು.