ಜಿಲ್ಲೆ

ಕಾವೇರಿ ನದಿ ನೀರಿಗೆ ಸಮರ್ಥ ಪ್ರತಿರೋಧ ವ್ಯಕ್ತಪಡಿಸದ ರಾಜ್ಯ ಸರ್ಕಾರ

ಸಿದ್ದಾಪುರ: ಕಾವೇರಿ ನದಿ ನೀರಿಗೆ ಸಂಬಂಧಿಸಿದಂತೆ ನಮ್ಮ ರಾಜ್ಯಕ್ಕೆ ತೀವ್ರ ಹಿನ್ನಡೆಯಾಗಿದೆ. ಇದಕ್ಕೆ ಕಾರಣ ಕೇಂದ್ರ ಸರ್ಕಾರವಾಗಲಿ ಅಥವಾ ಸಂಸದರಾಗಲಿ ಅಲ್ಲ. ನೀರು ಹರಿಸುವಿಕೆಗೆ ಆದೇಶವಾದಾಗ ಮತ್ತು ಸುಪ್ರೀಂ ಕೋರ್ಟ್ ಆದೇಶ ಬಂದಾಗ ರಾಜ್ಯ ಸರ್ಕಾರ ಸಮರ್ಥವಾಗಿ ಪ್ರತಿರೋಧ ವ್ಯಕ್ತಪಡಿಸಿಲ್ಲ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ನಾರಾಯಣಸ್ವಾಮಿ ಹೇಳಿದರು.

ಭಾನುವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರಿನ ವಿಚಾರದಲ್ಲಾದ ಹಿನ್ನಡೆಗೆ ಕಾರಣದ ಕುರಿತು ಚರ್ಚೆಯೇ ನಡೆದಿಲ್ಲ. ಸುಪ್ರೀಂ ಕೋರ್ಟ್ ನಿರ್ದೇಶನದಲ್ಲಿ ಜಂಟಿ ವಾಸ್ತವಾಂಶ ಪರಿಶೀಲನೆ ಮಾಡಬೇಕು ಎನ್ನುವುದು ನನ್ನ ಆಪೇಕ್ಷೆ ಯಾಗಿದೆ ಎಂದರು.

ರಾಜ್ಯದಿಂದ ನಮ್ಮ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ಕೆಲಸವಾಗಿಲ್ಲ. ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಭೆ ನಡೆಸುವ ಮೊದಲು ರಾಜ್ಯದ ಬಿಜೆಪಿ ಸಂಸದರು ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಕಾವೇರಿ ನೀರಿನ ಕುರಿತಾದ ಸಮಸ್ಯೆ ಪರಿಶೀಲಿಸಲು ಎರಡು ರಾಜ್ಯಗಳಿಗೆ ಜಂಟಿ ತಂಡಗಳನ್ನು ಕಳಿಸಿಕೊಡಬೇಕು, ವಾಸ್ತವಾಂಶ ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದೇವು. ಅವರೂ ನಮ್ಮ ಮನವಿಗೆ ಒಪ್ಪಿದ್ದರು. ಇದು ಮುಖ್ಯಮಂತ್ರಿಗಳ ಗಮನದಲ್ಲಿದೆ. ಈವರೆಗೂ ರಾಜ್ಯದ ತಜ್ಞರಿಗೆ ತಮಿಳುನಾಡಿನಲ್ಲಿ ಕೃಷಿ ಜಮೀನು, ನೀರು ಬಳಕೆ, ಬೆಳೆ ಮುಂತಾದವುಗಳ ಬಗ್ಗೆ ಮಾಹಿತಿ, ದಾಖಲೆ ಇಲ್ಲ. ಸುಪ್ರೀಂ ಕೋರ್ಟ್ ಗಮನ ಸೆಳೆದಿಲ್ಲ. ಈಗ ಪ್ರಧಾನಿಗಳ ಮಧ್ಯ ಪ್ರವೇಶದ ಬಗ್ಗೆ ವಾದ ನಡೆಯುತ್ತಿದೆ. ನ್ಯಾಯಾಂಗದ ಮುಂದಿರುವ ವಿಷಯದಲ್ಲಿ ಈ ರೀತಿಯ ಹಸ್ತಕ್ಷೇಪ ತಾಂತ್ರಿಕವಾಗಿ ಸಾಧ್ಯವಿಲ್ಲ ಎನ್ನುವ ಪರಿಕಲ್ಪನೆ ಇಲ್ಲದೆ ಮಾತಾಡುವದು ಸರಿಯಲ್ಲ. ಅವೆಲ್ಲವನ್ನು ಬದಿಗಿಟ್ಟು ಈ ಸಮಸ್ಯೆ ಬಗ್ಗೆ ಸಮರ್ಥವಾಗಿ ಹೋರಾಟ ನಡೆಸಬೇಕು. ಭಾರತೀಯ ಜನತಾ ಪಕ್ಷ ಯಾವತ್ತೂ ರಾಜ್ಯದ ಜನತೆ ಪರವಾಗಿದೆ ಎಂದರು.
ಎನ್​ಡಿಎಗೆ ಬೆಂಬಲ ಕೊಡಲು ಜೆಡಿಎಸ್ ಕೈ ಜೋಡಿಸಿದೆ. ಬಿಜೆಪಿ, ಜೆಡಿಎಸ್ ಮೈತ್ರಿಯಲ್ಲಿ ಯಾವ ಷರತ್ತುಗಳಾಗಲಿ, ಒಳ ಒಪ್ಪಂದಗಳಾಗಲಿ ಇಲ್ಲ ಎನ್ನುವ ಮಾಹಿತಿ ಇದೆ. ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್​ನ ಭ್ರಷ್ಟ ಸರ್ಕಾರ ತೆಗೆಯಲು ಮೈತ್ರಿ ಆಗುತ್ತಿದೆ. ಈ ಆಂತರಿಕ ವಿಷಯದ ಕುರಿತು ಚರ್ಚೆ ಮಾಡೋದಿಲ್ಲ ಎಂದರು. ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇದ್ದರು.