ನಂಜನಗೂಡು: ನಮ್ಮ ರಾಜ್ಯಕ್ಕೆ ರಾಜಕಾರಣಿಗಳು ಬೇಡ, ಜನನಾಯಕರು ಬೇಕಾಗಿದ್ದಾರೆ. ನಮ್ಮ ವೀರಶೈವ ಲಿಂಗಾಯತ ಸಮಾಜ ದೊಡ್ಡ ಆಲದ ಮರ ಇದ್ದ ಹಾಗೆ. ಎಲ್ಲ ಸಮುದಾಯಗಳನ್ನು ಅಣ್ಣ-ತಮ್ಮಂದಿರಂತೆ ಒಗ್ಗೂಡಿಸಿ ಮುನ್ನಡೆಯುತ್ತಾರೆ. ಬಸವಣ್ಣನವರ ಆದರ್ಶಗಳನ್ನು ನನಸು ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕರೆನೀಡಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿ, ರಾಜ್ಯದೆಲ್ಲೆಡೆ ಅದ್ದೂರಿಯಾಗಿ ಬಸವ ಜಯಂತಿ ಕಾರ್ಯಕ್ರಮಗಳು ನಡೆಯುತ್ತಿವೆ. 12ನೇ ಶತಮಾನದಲ್ಲಿ ಸಮ ಸಮಾಜವನ್ನು ನಿರ್ಮಾಣ ಮಾಡಬೇಕು ಎಂಬುದು ಬಸವಣ್ಣನವರ ಕನಸಾಗಿತ್ತು. ಅವರ ಕನಸನ್ನು ನಾವೆಲ್ಲರೂ ಇಂದಿನ ದಿನಗಳಲ್ಲಿ ನನಸು ಮಾಡಲು ಒಗ್ಗೂಡಬೇಕು ಎಂದರು.
ಸಮಾಜವನ್ನು ಒಡೆಯುವ ಕೆಲಸವನ್ನು ರಾಜಕಾರಣಿಗಳು ಮಾಡುತ್ತಿದ್ದಾರೆ. ಅವರನ್ನು ದೇವರು ಕ್ಷಮಿಸಲು ಸಾಧ್ಯವಿಲ್ಲ. ಕೇವಲ ಕಚೇರಿಗಳಲ್ಲಿ ಫೋಟೋಗಳನ್ನು ಅಳವಡಿಸಿದರೆ ಸಾಲದು. ಎಲ್ಲ ಸಮುದಾಯಗಳಿಗೂ ನ್ಯಾಯ ಕೊಡುವ ಕೆಲಸವನ್ನು ನಮ್ಮ ತಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಾಡಿದ್ದರು. ನಂಜನಗೂಡು ಪಟ್ಟಣದಲ್ಲಿ ಬಸವಭವನ ಇನ್ನು ಕೂಡ ಪೂರ್ಣಗೊಂಡಿಲ್ಲ. ಒಂದು ವೇಳೆ ನಮ್ಮ ತಂದೆ ಈ ಜಾಗದಲ್ಲಿ ಇದ್ದಿದ್ದರೆ ತಕ್ಷಣವೇ ಬಸವ ಭವನಕ್ಕೆ ಹಣ ಮಂಜೂರು ಮಾಡುತ್ತಿದ್ದರು ಎಂದರು.
ಬಸವಣ್ಣ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಬಸವಣ್ಣನವರ ತತ್ವ-ಆದರ್ಶಗಳನ್ನು ಅನುಷ್ಠಾನಗೊಳಿಸಬೇಕು. ಮಹಾಪುರುಷರು ಯಾವುದೇ ಜಾತಿಗೆ ಸೀಮಿತವಲ್ಲ. ಜಯಂತಿ ಆಚರಣೆ ಜತೆಗೆ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ದಾರಿಯಲ್ಲಿ ನಡೆಯಬೇಕು. ಸಮಾಜದಲ್ಲಿ ಸಮಾನತೆ ಇರದೆ, ಮೌಢ್ಯತೆ ತುಂಬಿ ಹೋಗಿತ್ತು. ಬಸವಣ್ಣನವರು ಅನುಭವ ಮಂಟಪದ ಮೂಲಕ ಸಮಸಮಾಜ ನಿರ್ಮಾಣದ ಕನಸು ಕಂಡಿದ್ದರು. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಆದರ್ಶದಂತೆ ಪ್ರತಿಯೊಬ್ಬರು ದುಡಿದು ತಿನ್ನಬೇಕು ಎಂದರು.
ಸುಮಾರು 650 ಕೋಟಿ ರೂ. ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡಲಾಗುತ್ತಿದ್ದು, ಯಡಿಯೂರಪ್ಪ ಅವರ ಕಾಲದಲ್ಲಿ ಇನ್ನೂರು ಕೋಟಿ ರೂ. ಬಿಡುಗಡೆಯಾಗಿತ್ತು. ಪ್ರಸ್ತುತ 125 ಕೋಟಿ ರೂ. ಬಿಡುಗಡೆಯಾಗಿದ್ದು, ಬೇಕಿರುವ 400 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿಸಿ ಪೂರ್ಣಗೊಳಿಸುವ ಪ್ರಯತ್ನವನ್ನು ಮಾಡುತ್ತೇನೆ. ಇತ್ತೀಚೆಗೆ 30% ಯುವಕರು ಮೊಬೈಲ್ ಫೋನಿನಿಂದ ಹಾಳಾಗುತ್ತಿದ್ದಾರೆ. ಇಂತಹ ಯುವಕರು ಸರಿದಾರಿಗೆ ತರಲು ಅನುಭವ ಮಂಟಪ ಸಹಕಾರಿಯಾಗಲಿದೆ. ಹಾಗೆ ತಾಲೂಕಿನಲ್ಲಿ ಡುಪ್ರಾಣಿಗಳ ಹಾವಳಿ ತಡೆಯಲು ಸತತ ಪ್ರಯತ್ನವನ್ನು ಸರ್ಕಾರ ಮಾಡಲಾಗುತ್ತಿದೆ ಎಂದರು.
ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ಗ್ರಾಮಾಂತರ ಭಾಗಗಳು ಸೇರಿದಂತೆ ಪಟ್ಟಣದಲ್ಲಿರುವ ಬಸವ ಭವನ ನಿರ್ಮಾಣದ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿ 5 ಕೋಟಿ ರೂ. ಬಿಡುಗಡೆ ಮಾಡಿಸಿ ಪೂರ್ಣಗೊಳಿಸುವ ಬಗ್ಗೆ ಸಮಾಜಕ್ಕೆ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ನಾಗರಾಜೇಂದ್ರ ಸ್ವಾಮೀಜಿ, ಶ್ರೀ ಚನ್ನಬಸವ ಸ್ವಾಮೀಜಿ, ಶ್ರೀ ಇಮ್ಮಡಿ ಚನ್ನಮಲ್ಲ ದೇಸಿ ಕೇಂದ್ರ ಸ್ವಾಮೀಜಿ, ಶ್ರೀಬಸವಣ್ಣ ಸ್ವಾಮೀಜಿ, ಶ್ರೀ ಕೆಂಡಗಣ್ಣ ಸ್ವಾಮೀಜಿ, ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ, ಶ್ರೀ ಮಹಾಂತ ದೇಶ ಕೇಂದ್ರ ಸ್ವಾಮೀಜಿ, ಶ್ರೀ ಮಹೇಶ್ವರ ಸ್ವಾಮೀಜಿ, ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ನಟರಾಜ ಸ್ವಾಮೀಜಿ, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ಮಾಜಿ ಶಾಸಕ ಹರ್ಷವರ್ಧನ್, ಕಳಲೆ ಕೇಶವಮೂರ್ತಿ, ಹಿನಕಲ್ ಬಸವರಾಜು, ಎಚ್ ಕೆ ಚೆನ್ನಪ್ಪ, ಎಸ್ ಎಂ ಕೆಂಪಣ್ಣ, ಶಿವಪ್ಪ ದೇವರು, ಎಂಪಿ ನಟರಾಜು , ವೀರಶೈವ ಮಹಾಸಭಾ ಸದಸ್ಯರು ಇತರರು ಹಾಜರಿದ್ದರು.
ಬಸವ ಜಯಂತಿ ಮೆರವಣಿಗೆಗೆ ಚಾಲನೆ: ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಶ್ರೀಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಮೆರವಣಿಗೆಗೆ ಶ್ರೀ ನಾಗರಾಜೇಂದ್ರ ಸ್ವಾಮಿ, ಶ್ರೀ ಚನ್ನಬಸವ ಸ್ವಾಮೀಜಿಗಳ ಸಮ್ಮುಖದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಶಾಸಕ ದರ್ಶನ್ ಧ್ರುವನಾರಾಯಣ ಬಸವಣ್ಣನವರ ಪ್ರತಿಮೆಗೆ ಪುಷ್ಪಾರ್ಚನೆ ಮೂಲಕ ಚಾಲನೆ ನೀಡಿದರು.
ಮೆರವಣಿಗೆಯು ದೇವಸ್ಥಾನದಿಂದ ಹೊರಟು ರಾಷ್ಟ್ರಪತಿ ರಸ್ತೆಯ ಮೂಲಕ ವಿದ್ಯಾವರ್ಧಕ ಮೈದಾನಕ್ಕೆ ತಲುಪಿತು. ಮೆರವಣಿಗೆಯಲ್ಲಿ ಕಂಸಾಳೆ, ವೀರಗಾಸೆ, ನಂದಿಧ್ವಜ, ಡೊಳ್ಳು ಕುಣಿತ ಸೇರಿದಂತೆ ಹಲವು ಜಾನಪದ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಸಾವಿರಾರು ಸಂಖ್ಯೆಯಲ್ಲಿ ತಾಲೂಕಿನಿಂದ ವೀರಶೈವ ಲಿಂಗಾಯತ ಸಮಾಜದ ಜನರು ಸೇರಿದಂತೆ ಮುಖಂಡರು ಹಾಜರಿದ್ದರು.
ಪ್ರಸಾದ ವ್ಯವಸ್ಥೆ: ಬಸವ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದ ಸಾರ್ವಜನಿಕರಿಗೆ ಪಟ್ಟಣದಲ್ಲಿರುವ ಕಬ್ಬಳ್ಳಿ ವಿದ್ಯಾರ್ಥಿ ನಿಲಯದಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.