ನರೇಗಲ್ಲ: ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಮುಂಗಾರು ಮಳೆಯ ಕೊರತೆಯ ನಡುವೆ ಹೆಸರು ಬಿತ್ತನೆ ಮಾಡಿದ್ದ ರೈತರು ಈಗ ಕಂಗಾಲಾಗಿದ್ದಾರೆ.
ಕಾರಹುಣ್ಣಿಮೆಯ ಹತ್ತಿರ ಸುರಿದ ಅಲ್ಪಸ್ವಲ್ಪ ರೋಹಿಣಿ ಮಳೆಯನ್ನು ನೆಚ್ಚಿಕೊಂಡು ರೈತರು ಬಿತ್ತನೆಯ ತಿಥಿ ಮೀರದಿರಲಿ ಎಂದು ಹೆಸರು ಬಿತ್ತನೆ ಮಾಡಿದ್ದಾರೆ. ಅಲ್ಪಸ್ವಲ್ಪ ತೇವಾಂಶದಲ್ಲಿ ಮೊಳಕೆಯೊಡೆದು ನಿಂತಿರುವ ಬೆಳೆಗಳಿಗೆ ಈಗ ಮಳೆಯ ಅವಶ್ಯವಿದೆ. ಇನ್ನೆರಡು ದಿನಗಳಲ್ಲಿ ಮಳೆಯಾಗದಿದ್ದರೆ ಹೆಸರು ಬೆಳೆ ಬಹುತೇಕ ಕರಗಿ ಹೋಗಲಿದೆ.
44,820 ಹೆಕ್ಟೇರ್‌ನಲ್ಲಿ ಬಿತ್ತನೆ: ಪಟ್ಟಣ, ಕೋಡಿಕೊಪ್ಪ, ಕೋಚಲಾಪುರ, ತೋಟಗಂಟಿ, ದ್ಯಾಂಪುರ, ಮಲ್ಲಾಪುರ, ಅಬ್ಬಿಗೇರಿ, ಯರೇಬೇಲೇರಿ, ಕುರಡಗಿ, ಗುಜಮಾಗಡಿ, ಡ.ಸ. ಹಡಗಲಿ, ಜಕ್ಕಲಿ, ಬೂದಿಹಾಳ, ನಿಡಗುಂದಿ, ನಿಡಗುಂದಿಕೊಪ್ಪ, ಮಾರನಬಸರಿ, ಕಳಕಾಪುರ, ಹಾಲಕೆರೆ ಸೇರಿದಂತೆ ಹೋಬಳಿಯಾದ್ಯಂತ 44,820 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆ ಬಿತ್ತನೆಯಾಗಿದೆ. ಬಿತ್ತನೆಯಾದ ಹೆಸರು ಭೂಮಿ ಬಿಟ್ಟು ಮೇಲೆದ್ದಿದ್ದರೂ ತೇವಾಂಶದ ಕೊರತೆಯಾಗುತ್ತಿದೆ. ಬಿರುಬಿಸಿಲು, ಬಿರುಗಾಳಿಗೆ ಮೊಳಕೆ ಬಂದ ಸಸಿಗಳು ನಲುಗುತ್ತಿವೆ. ಕಣ್ಣಮುಂದೆಯೇ ಚಿಗುರು ಕಮರುತ್ತಿರುವುದನ್ನು ಕಂಡು ಅನ್ನದಾತ ಮರಗುತ್ತಿದ್ದಾನೆ.
ಶೇ.47ರಷ್ಟು ಮಳೆ ಕೊರತೆ: ನರೇಗಲ್ಲ ಹೋಬಳಿಯಲ್ಲಿ ಜನವರಿಯಿಂದ ಜೂ.15ರ ವರೆಗೆ 158.3 ಮಿ.ಮೀ ಮಳೆಯಾಗಬೇಕಿತ್ತು. ಆದರೆ, 84.5 ಮಿ.ಮೀ ಮಳೆಯಾಗಿದ್ದು, ಶೇ.47ರಷ್ಟು ಮಳೆ ಕೊರತೆಯಾಗಿದೆ. ರೈತರು ಮಳೆಗಾಗಿ ಗುರ್ಜಿಪೂಜೆ, ವಾರ ಆಚರಣೆ, ಕತ್ತೆ ಮದುವೆ ಸೇರಿ ಹಲವು ಬಗೆಯಲ್ಲಿ ದೇವರ ಮೊರೆ ಹೋಗುತ್ತಿದ್ದಾರೆ. ಆದರೆ, ವರುಣದೇವ ಕಣ್ಣುತೆರೆಯುವ ಲಕ್ಷಣಗಳಿಲ್ಲ.
ರೋಹಿಣಿ ಮತ್ತು ಮೃಗಶಿರ ಮಳೆ ನಂಬಿ ಹೆಸರು ಬಿತ್ತನೆ ಮಾಡಲಾಗಿದೆ. ಆದರೆ ಸರಿಯಾಗಿ ಮಳೆ ಸುರಿಯುತ್ತಿಲ್ಲ. ತೇವಾಂಶದ ಕೊರತೆಯಿಂದ ಬೆಳೆಗಳು ಬಾಡುತ್ತಿವೆ. ಕಣ್ಣಮುಂದೆ ಬೆಳೆ ಹಾನಿಯಾಗುವುದನ್ನು ನೋಡಿಕೊಂಡು ಏನೂ ಮಾಡಲಾಗದ ಸ್ಥಿತಿ ನಮ್ಮದಾಗಿದೆ. ದೇವರು ಕೃಪೆ ತೋರಿ ಮಳೆಯಾದರೆ ಬೆಳೆ ಉಳಿಯುತ್ತದೆ.ಇಲ್ಲದಿದ್ದರೆ ಹೆಸರು ಹೇಳ ಹೆಸರಿಲ್ಲದಂತಾಗಲಿದೆ.-ಉದಯ ಕಳಕೊಣ್ಣವರ, ನಿಂಗಪ್ಪ ಬೆಡಗಲ್ಲ, ರೈತರು ನರೇಗಲ್ಲ ರೋಣ, ಗಜೇಂದ್ರಗಡ ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಸಂಪೂರ್ಣ ಮಳೆಯಾದರೆ ಮಾತ್ರ ಬಿತ್ತನೆ ಮಾಡಬೇಕು. ಈಗಾಗಲೇ ಬಿತ್ತನೆ ಮಾಡಿದ ಹೆಸರು ತೇವಾಂಶದ ಕೊರತೆಯಿಂದ ಒಣಗುತ್ತಿದೆ. ಪ್ರಕೃತಿಯೇ ಎಲ್ಲದಕ್ಕೂ ಪರಿಹಾರ. ಹೆಸರು ಅಲ್ಪಕಾಲದ ಬೆಳೆಯಾಗಿದ್ದು, ಮಳೆಯಾದರೆ ಮಾತ್ರ ಕೈಸೇರಲಿದೆ.-ರವೀಂದ್ರಗೌಡ ಪಾಟೀಲ, ಸಹಾಯಕ ಕೃಷಿ ನಿರ್ದೆಶಕ, ರೋಣ