ಸಕಲೇಶಪುರ: ಅಧ್ಯಾತ್ಮದ ಮೂಲಕ ಭಾರತ ಇಡೀ ಜಗತ್ತನ್ನೇ ಆಳುವ ಸಮಯ ಸಮೀಪಿಸಲಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಚಂಚಲಾ ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ಶುಕ್ರವಾರ ಆಯೋಜಿಸಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಕಿರ್ಣದ ಬದುಕಿನಲ್ಲಿ ಮನುಷ್ಯನಿಗೆ ಅಂತಿಮವಾಗಿ ನೆಮ್ಮದಿ ಅಗತ್ಯ ಇದೆ. ಇದನ್ನು ಅಧ್ಯಾತ್ಮ ಕಲ್ಪಿಸಲಿದೆ. ಹೀಗಾಗಿ ಅಧ್ಯಾತ್ಮದತ್ತ ಜನರು ಆಕರ್ಷಿತರಾಗುತ್ತಿದ್ದಾರೆ ಎಂದು ತಿಳಿಸಿದರು.
ತಾಪಂ ಸದಸ್ಯ ಯಡೇಹಳ್ಳಿ ಆರ್.ಮಂಜುನಾಥ್ ಮಾತನಾಡಿ, ಪ್ರಪಂಚದ ಹಲವು ವಿಜ್ಞಾನಿಗಳು ಹಲವು ಸಂಶೋಧನೆಗಳನ್ನು ನಡೆಸಿ ಹಲವು ಅಂಶಗಳನ್ನು ಕಂಡುಹಿಡಿದಿದ್ದಾರೆ. ಹಾಗೆಯೇ, ಮನುಷ್ಯನೊಳಗಿರುವ ಅಗೋಚರ ಶಕ್ತಿಯನ್ನು ಋಷಿಮುನಿಗಳು ಪತ್ತೆ ಹೆಚ್ಚಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ದೇವರಾಜ್, ಸಮಾಜ ಸೇವಕಿ ಚನ್ನವೇಣಿ ಎಂ ಶೆಟ್ಟಿ, ಪ್ರಜಾಪಿತ ಬ್ರಹ್ಮಕುಮಾರಿ ವಿದ್ಯಾಲಯದ ಮುಖ್ಯಸ್ಥರಾದ ವಿನೋದ, ಐ.ಜಿ.ರಾಜು ಮತ್ತಿತರರು ಹಾಜರಿದ್ದರು.