The sound of the planks in Guledagudda is loud.  
ಜಿಲ್ಲೆ

ಗುಳೇದಗುಡ್ಡದಲ್ಲಿ ಹಲಗೆ ಸದ್ದು ಜೋರು

ಗುಳೇದಗುಡ್ಡ: ಹೋಳಿ ಹಬ್ಬ ಬಂತೆಂದರೆ ಸಾಕು, ಖಣದ ನಗರಿಯ ಗಲ್ಲಿಗಲ್ಲಿಯಲ್ಲೂ ಯುವಕರು, ಮಕ್ಕಳು ಹಲಗೆ ಬಾರಿಸುವ ಸದ್ದು ಜೋರಾಗುತ್ತದೆ. ಮಹಾಶಿವರಾತ್ರಿ ಮಾರನೇ ದಿನ ಪಟ್ಟಣದಲ್ಲಿ ಹಲಗೆ ಸದ್ದು ಮಾಡಲಾರಂಭಿಸಿದ್ದು, ಮಾರುಕಟ್ಟೆಗೆ ವಿವಿಧ ಬಗೆಯ ಹಲಗೆಗಳು ಲಗ್ಗೆ ಇಟ್ಟಿವೆ.

ರಂಗಿನಾಟದ ಹೋಳಿಹಬ್ಬದ ಆಕರ್ಷಣೆಯೇ ಹಲಗೆ ಬಾರಿಸುವುದು. ವಿವಿಧ ಬಗೆ, ಆಕಾರದ ಫೈಬರ್ ಹಲಗೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಜತೆಗೆ ಒಂದಿಷ್ಟು ಚರ್ಮದ ಹಲಗೆಗಳೂ ರಾರಾಜಿಸುತ್ತಿವೆ. ಆದರೆ ಫೈಬರ್ ಹಲಗೆಗಳಿಗೆ ಇರುವಷ್ಟು ಡಿಮಾಂಡ್ ಚರ್ಮದ ಹಲಗೆಗಳಿಗೆ ಇಲ್ಲ. ಫೈಬರ್ ಹಲಗೆಗಳ ದರ 500ರಿಂದ 800 ರೂ.ವರೆಗೆ ಇದ್ದರೆ, ಅದೇ ಗಾತ್ರದ ಚರ್ಮದ ಹಲಗೆಗಳ ಬೆಲೆ 1500ರಿಂದ 2000 ರೂ.ವರೆಗೆ ಇದೆ. ಹೀಗಾಗಿ ಹೆಚ್ಚಿನ ಬೆಲೆಯಿಂದಾಗಿಯೂ ಚರ್ಮದ ಹಲಗೆಗಳನ್ನು ಖರೀದಿಸಲು ಹೆಚ್ಚಾಗಿ ಗ್ರಾಹಕರು ಮುಂದಾಗುತ್ತಿಲ್ಲ.

ಇನ್ನು ಪಟ್ಟಣದ ಚೌ ಬಜಾರ, ಅರಳಿಕಟ್ಟಿ, ಭಾರತ್ ಮಾರ್ಕೆಟ್, ಕೆಳಗಿನ ಪೇಟೆ, ಸರಪ್ ಬಜಾರ ಸೇರಿದಂತೆ ಹಲವೆಡೆ ತರಹೇವಾರಿ ಹಲಗೆಗಳು ಮಾರಾಟಕ್ಕಿದೆ. ಫೈಬರ್ ಹಲಗೆಗಳ ಖರೀದಿ ಜೋರಾಗಿದೆ.