ರಾಯಚೂರು: ಜೀವನದಲ್ಲಿ ಬರುವ ಎಲ್ಲ ರೀತಿಯ ಸಮಸ್ಯೆಗಳಿಗೆ ಭಗದ್ಗೀತೆಯಲ್ಲಿ ಪರಿಹಾರವಿದೆ. ಭಗದ್ಗೀತೆಯಲ್ಲಿನ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಜೀವನ ಆನಂದಮಯವಾಗಿರುತ್ತದೆ ಎಂದು ಮಿಟ್ಟಿ ಮಲ್ಕಾಪುರ ಶಾಂತಾಶ್ರಮದ ನಿಜಾನಂದ ಸ್ವಾಮೀಜಿ ಹೇಳಿದರು.
ಸ್ಥಳೀಯ ಶಂಕರಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಭಗದ್ಗೀತಾ ಸಮರ್ಪಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಭಗದ್ಗೀತೆ ಪಠಣ ಮಾಡಿಸುವ ಮೂಲಕ ಅವರಲ್ಲಿ ಉತ್ತಮ ಗುಣಗಳನ್ನು ಬೆಳೆಸಬೇಕು ಎಂದರು.
ಶ್ರೀಕೃಷ್ಣ ಅರ್ಜುನನ್ನು ನಿಮಿತ್ತ ಮಾಡಿ ನಮ್ಮೆಲ್ಲರಿಗೂ ಸಂದೇಶವನ್ನು ನೀಡಿದ್ದಾರೆ. ಎಲ್ಲ ಕಾಲಕ್ಕೂ ಭಗದ್ಗೀತೆ ಅನ್ವಯವಾಗುತ್ತಿದ್ದು, ಎಲ್ಲರೂ ಭಕ್ತಿ, ಶ್ರದ್ಧೆಯಿಂದ ಭಗದ್ಗೀತೆಯನ್ನು ಪಠಣ ಮಾಡಲು ಮುಂದಾಗಬೇಕು ಎಂದು ಹೇಳಿದರು.
ವಾಣಿಜ್ಯೋದ್ಯಮಿ ಸದಾನಂದ ಪ್ರಭು ಮಾತನಾಡಿ, ಸನಾತನ ಧರ್ಮಕ್ಕೆ ಎಂದಿಗೂ ಜಯ ಸಿಗುತ್ತದೆ. ಇಂದು ಶ್ರೀರಾಮಚಂದ್ರನ ಭವ್ಯ ಮಂದಿರ ಉದ್ಘಾಟನೆಗೆ ಸಜ್ಜಾಗಿದ್ದು, ಜ.22ರಂದು ಮಂದಿರದ ಉದ್ಘಾಟನೆಯನ್ನು ಎಲ್ಲರೂ ಸಂಭ್ರಮದಿಂದ ಸ್ವಾಗತಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭಗದ್ಗೀತೆ ಕಂಠ ಪಾಠ ಸ್ಪರ್ಧೆ, ಭಾಷಣ ಸ್ಪರ್ಧೆ, ರಂಗೋಲಿ, ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಗರಸಭೆ ಸದಸ್ಯ ಈ.ಶಶಿರಾಜ, ಮುಖಂಡರಾದ ಬಿ.ಗೋವಿಂದ, ವಿಜಯಕುಮಾರ ಹೂಗಾರ, ಈಶ್ವರ ಹೆಗಡೆ, ಪರಿಮಳ ದೀಕ್ಷಿತ್, ಗಾಯತ್ರಿ ಶೆಲ್ವಾಡೆ, ಭಗದ್ಗೀತಾ ಸಮರ್ಪಣ ಸಮಿತಿ ಅಧ್ಯಕ್ಷ ಡಾ.ಆನಂದತೀರ್ಥ ಡ್ನಿಸ್ ಉಪಸ್ಥಿತರಿದ್ದರು.