ಹನೂರು ತಾಲೂಕಿನ ಗ್ರಾಮ ಪಂಚಾಯಿತಿಗಳಿಂದ ಸಂಗ್ರಹಿಸುವ ಮಣ್ಣಿನ ಅಮೃತ ಕಳಸ ಯಾತ್ರೆಗೆ ಶಾಸಕ ಎಂ.ಆರ್ ಮಂಜುನಾಥ್ ಚಾಲನೆ ನೀಡಿದರು. 
ಜಿಲ್ಲೆ

ಗ್ರಾಪಂನಿಂದ ಸಂಗ್ರಹಿಸಿದ ಮಣ್ಣು ದೇಶದ ಐಕ್ಯತೆ ಸಂಕೇತ

ಹನೂರು: ಅಮೃತ ಮಹೋತ್ಸವದ ಸ್ಮಾರಣಾರ್ಥವಾಗಿ ನವದೆಹಲಿಯಲ್ಲಿ ಉದ್ಯಾನ ಅಭಿವೃದ್ಧಿಪಡಿಸಲು ಪ್ರತಿ ಗ್ರಾಮ ಪಂಚಾಯಿತಿ ವತಿಯಿಂದ ಸಂಗ್ರಹಿಸಿರುವ ಮಣ್ಣು ದೇಶದ ಐಕ್ಯತೆಯ ಪ್ರತೀಕ. ಈ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗಿರುವುದು ಮೆಚ್ಚುಗೆಯ ಸಂಗತಿ ಎಂದು ಶಾಸಕ ಎಂ.ಆರ್.ಮಂಜುನಾಥ್ ಪ್ರಶಂಸಿಸಿದರು.

ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ತಾಲೂಕು ಪಂಚಾಯಿತಿ, ನಗರಾಭಿವೃದ್ಧಿ ಕೋಶ ಹಾಗೂ ಯುವಜನ ಮತ್ತು ಕ್ರೀಡಾ ಇಲಾಖೆ ವತಿಯಿಂದ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮದಡಿ ಆಯೋಜಿಸಿದ್ದ ಮಣ್ಣು ಸಂಗ್ರಹಣೆಯ ಅಮೃತ ಕಳಸ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರ ಎರಡು ವರ್ಷಗಳಿಂದ ವಿವಿಧ ಕಾರ್ಯಕ್ರಮ ಆಯೋಜಿಸುತ್ತಿದೆ. ಇದರಿಂದ ಜನರು ದೇಶದ ಭವ್ಯ ಇತಿಹಾಸ ಹಾಗೂ ಸಂಸ್ಕೃತಿ ಸಾಧನೆಗಳನ್ನು ಸ್ಮರಿಸಲು ನೆರವಾಗುವುದರ ಮೂಲಕ ದೇಶಾಭಿಮಾನ ಹೆಚ್ಚಾಗಲು ಸಹಕಾರಿಯಾಗಿದೆ. ಜತೆಗೆ ದೇಶ ಭೂಮಿಯೊಂದಿಗೆ ಸಂಪರ್ಕ ಸಾಧಿಸಿ ಯೋಧರನ್ನು ಗೌರವಿಸುವುದರ ಮೂಲಕ ಜನರಲ್ಲಿ ರಾಷ್ಟ್ರೀಯ ಭಾವೈಕ್ಯತೆಯನ್ನು ಮೂಡಿಸುತ್ತದೆ. ಇದು ಮುಂದಿನ ಪೀಳಿಗೆಗೆ ಸ್ಫೂರ್ತಿದಾಯಕವಾಗಿದೆ. ಈ ದಿಸೆಯಲ್ಲಿ ದೆಹಲಿಯಲ್ಲಿ ಉದ್ಯಾನ ಅಭಿವೃದ್ಧಿ ಪಡಿಸಲು ದೇಶದ ಎಲ್ಲ ಭಾಗಗಳಿಂದ ಮಣ್ಣನ್ನು ಸಂಗ್ರಹಿಸಲಾಗಿದ್ದು, ಹನೂರು ತಾಲೂಕಿನ ಗ್ರಾಪಂಗಳಿಂದ ಸಂಗ್ರಹವಾದ ಮಣ್ಣನ್ನು ಕಳಸದ ಮೂಲಕ ಕಳುಹಿಸುತ್ತಿರುವುದು ನಮ್ಮೆಲ್ಲರ ಹೆಮ್ಮೆ. ಇದು ದೇಶ ಪ್ರೇಮವನ್ನು ಎತ್ತಿ ಹಿಡಿಯುವಂತಹ ಕೆಲಸವಾಗಿದೆ ಎಂದು ತಿಳಿಸಿದರು.

ಪಪಂ ಸದಸ್ಯ ಹರೀಶ್‌ಕುಮಾರ್ ಮಾತನಾಡಿ, ಈ ಕಾರ್ಯಕ್ರಮ ಯೋಧರ ವೀರತ್ವದ ಏಕೀಕೃತ ಆಚರಣೆಯನ್ನು ನೆನಪಿಸುತ್ತದೆ. ಇದರಿಂದ ಸದೃಢ ರಾಷ್ಟ್ರ ನಿರ್ಮಿಸಲು ಸಹಕಾರಿಯಾಗಿದೆ. ಅಲ್ಲದೆ ದೇಶದ ಪರಂಪರೆ ರಕ್ಷಿಸಲು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿದೆ. ಹಾಗಾಗಿ ಇಂತಹ ಕಾರ್ಯಕ್ರಮ ದೇಶದ ಏಕತೆಯ ಸಂಕೇತ. ಈ ಕಾರ್ಯದಲ್ಲಿ ಭಾಗಿಯಾಗಿರುವುದು ಹೆಮ್ಮೆಯ ವಿಷಯ ಎಂದರು.

ಬಳಿಕ ಅಮೃತ ಕಳಸ ಯಾತ್ರೆಯನ್ನು ವಾದ್ಯ ಮೇಳದೊಂದಿಗೆ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಬೀಳ್ಕೊಡಲಾಯಿತು. ಜಿಪಂ ಯೋಜನಾ ನಿರ್ದೇಶಕ ಕಿರಣ್, ತಾಪಂ ಇಒ ಉಮೇಶ್, ಪಪಂ ಸದಸ್ಯರಾದ ಮಂಜುಳಾ, ಸುದೇಶ್, ಗಿರೀಶ್, ಪಿಡಿಒಗಳಾದ ನಂಜುಂಡಸ್ವಾಮಿ, ಮಾದೇಶ್, ರಘುನಾಥ್, ಸುರೇಶ್, ರಾಮು, ವೈರಮಾಣಿಕ್ಯಂ, ರವಿಕುಮಾರ್ ಹಾಗೂ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ಇದ್ದರು.