ಬಳ್ಳಾರಿಯ ವಿಎಸ್‌ಕೆ ವಿವಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸಮಾಜ ಕಾರ್ಯ ದಿನಾಚರಣೆ ಕಾರ್ಯಕ್ರಮವನ್ನು ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಉದ್ಘಾಟಿಸಿದರು. ಕುಲಸಚಿವರಾದ ಎಸ್.ಎನ್.ರುದ್ರೇಶ್, ಪ್ರೊ.ಎನ್.ಎಂ.ಸಾಲಿ, ಪ್ರೊ.ಗೌರಿ ಮಾಣಿಕ ಮಾನಸ, ಪ್ರೊ.ರಶ್ಮಿ ರಾಣಿ ಅಗ್ನಿಹೋತ್ರಿ ಇದ್ದರು. 
ಜಿಲ್ಲೆ

ಕಾರ್ಯಕರ್ತರ ಸಾಮಾಜಿಕ ಸೇವೆ ಶ್ಲಾಘನೀಯ

ಬಳ್ಳಾರಿ: ಮಾನವನ ಕಲ್ಯಾಣಕ್ಕೆ ಸಹಕಾರಿಯಾಗುವ ಸಮಾಜ ಕಾರ್ಯ ವಿಶ್ವ ಮಾನ್ಯತೆ ಪಡೆದಿದೆ. ಇಂದಿಗೂ ವೃತ್ತಿಪರ ಸಮಾಜ ಕಾರ್ಯಕರ್ತರ ಸಾಮಾಜಿಕ ಕಾಳಜಿ ಹಾಗೂ ಸೇವೆ ಶ್ಲಾಘನೀಯ ಎಂದು ವಿಎಸ್‌ಕೆ ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಹೇಳಿದರು.

ನಗರದ ವಿಎಸ್‌ಕೆ ವಿವಿಯಲ್ಲಿ ಸಮಾಜ ಕಾರ್ಯ ವಿಭಾಗದಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಸಮಾಜ ಕಾರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಮಾಜಿಕ ನ್ಯಾಯ, ಮಾನವ ಹಕ್ಕುಗಳನ್ನು ಕಾಪಾಡುವುದು, ಶೋಷಿತ ಮಹಿಳೆಯರು, ಮಕ್ಕಳು, ವೃದ್ಧರು ಹಾಗೂ ಅನಾಥರನ್ನು ಆರೈಕೆ ಮಾಡುವ ಸಾಮಾಜಿಕ ಕಾರ್ಯಕರ್ತರನ್ನು ನೆನೆಯಲು 1983ರಿಂದ ಸಾಮಾಜಿಕ ಕಾರ್ಯಕರ್ತರ ಅಂತಾರಾಷ್ಟ್ರೀಯ ಒಕ್ಕೂಟದಿಂದ ಮಾರ್ಚ್ ತಿಂಗಳ ಮೂರನೇ ಮಂಗಳವಾರ ವಿಶ್ವ ಸಮಾಜ ಕಾರ್ಯ ದಿನ ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಕುಲಸಚಿವ ಎಸ್.ಎನ್.ರುದ್ರೇಶ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್, ಲೋಹಿಯಾ, ಶಾಂತವೇರಿ ಗೋಪಾಲ ಗೌಡರ ತತ್ವಾದರ್ಶಗಳು ವಿದ್ಯಾರ್ಥಿ ಸಮಾಜ ಕಾರ್ಯಕರ್ತರಿಗೆ ಮಾದರಿ ಎಂದರು.

ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಎಂ.ಸಾಲಿ ಮಾತನಾಡಿ, ಕರ್ನಾಟಕ ಕಂಡ ಅಪರೂಪದ ಸಮಾಜ ಸೇವಕ, ನಾಡಿನಾದ್ಯಂತ ಸ್ಮರಿಸುತ್ತಿರುವ ಡಾ.ಪುನೀತ್‌ರಾಜಕುಮಾರ ಹಾಗೂ ಜಿಲ್ಲೆಯಲ್ಲಿ ಹದಿನೇಳನೇ ವಯಸ್ಸಿಗೆ ತಮ್ಮ ದುಡಿಮೆಯ ಬಹುಪಾಲನ್ನು ಅನಾಥ ಮತ್ತು ವಿಕಲಚೇತನ ಮಕ್ಕಳ ಸೇವೆಗೆ ಮೀಸಲಿರಿಸಿದ ಕಾವ್ಯ ಯುಕರಿಗೆ ಆದರ್ಶ ಎಂದು ಹೇಳಿದರು.