ಜಿಲ್ಲೆ

ಹೊಯ್ಸಳ ಶಿಲ್ಪಿಗಳ ಕೌಶಲ ಅಪರೂಪ: ಪ್ರಾಧ್ಯಾಪಕ ರೋಹಿತ್ ಈಶ್ವರ

ಮೈಸೂರು: ಕಲ್ಲಿನಲ್ಲೇ ಚಲನಶೀಲತೆ, ಭಾವಭಂಗಿ ಮತ್ತು ನೃತ್ಯದ ಲಯವನ್ನು ಮೂಡಿಸುವ ಹೊಯ್ಸಳ ಶಿಲ್ಪಿಗಳ ಕೌಶಲ ಅಪರೂಪ ಎಂದು ಮಹಾರಾಜ ಕಾಲೇಜಿನ ಪ್ರಾಚೀನ ಇತಿಹಾಸ, ಪುರಾತತ್ವ ಮತ್ತು ಮ್ಯೂಸಿಯಾಲಜಿ ವಿಭಾಗದ ಪ್ರಾಧ್ಯಾಪಕ ರೋಹಿತ್ ಈಶ್ವರ ಬಣ್ಣಿಸಿದರು.

ಡಾ.ವಿಜಯಲಕ್ಷ್ಮಿಬಸವರಾಜ್ ಚಾರಿಟಬಲ್ ಸೊಸೈಟಿಯು ಮತ್ತು ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ ಅವರು ‘ಹೊಯ್ಸಳ ಶಿಲ್ಪಕಲೆಯೊಳಗೆ ಪಡಿಮೂಡಿಬಂದ ನೃತ್ಯ ನಾದ ರಂಗ’ ವಿಷಯ ಕುರಿತು ಉಪನ್ಯಾಸ ನೀಡಿದರು.

11ನೇ ಶತಮಾನದಿಂದ 14ನೇ ಶತಮಾನದವರೆಗೆ ಅರಳಿದ ಹೊಯ್ಸಳ ವಂಶದ ಶಿಲ್ಪಕಲೆ ಮತ್ತು ಅದರ ಸಾಂಸ್ಕೃತಿಕ ಮಹತ್ವ ವಿವರಿಸಿ, ಬೇಲೂರಿನ ಚೆನ್ನಕೇಶವ ದೇವಾಲಯದ ಮದನಿಕೆಗಳು ಹೊಯ್ಸಳ ನೃತ್ಯ ಶಿಲ್ಪಗಳ ಅಮೂಲ್ಯ ಉದಾಹರಣೆಗಳಾಗಿದ್ದು, ನಾಟ್ಯಶಾಸ್ತ್ರದ ಕರಣಮುದ್ರೆಗಳ ಸುಂದರ ಭಂಗಿಯನ್ನು ಪ್ರತಿಬಿಂಬಿಸುತ್ತವೆ. ಶಿಲೆಗಳಲ್ಲಿ ವೀಣೆ, ಮೃದಂಗ, ಬಾಸುರಿ, ಶಂಖ, ತಾಳಗಳು ಮುಂತಾದ ವಾದ್ಯಗಳನ್ನು ವಾದಿಸುತ್ತಿರುವ ವಿಗ್ರಹಗಳು ಕಂಡುಬರುತ್ತವೆ. ಕೆಲವೆಡೆ ನೃತ್ಯಗಾರರೊಂದಿಗೆ ಗಾಯಕರನ್ನೂ ವಾದ್ಯಗಾರರನ್ನೂ ಸೇರಿಸಿ ಕೆತ್ತಿರುವುದರಿಂದ ಆ ಕಾಲದ ಸಮೂಹ ನೃತ್ಯಸಂಗೀತ ಸಮರ್ಪಣೆಗಳು ಪ್ರತಿಫಲಿಸುತ್ತವೆ ಎಂದರು.

ಹೊಯ್ಸಳ ಶಿಲ್ಪಗಳು ಕೇವಲ ಅಲಂಕಾರಿಕವಲ್ಲ, ಅವು ಆ ಕಾಲದ ಧಾರ್ಮಿಕ, ಐತಿಹಾಸಿಕ ಮತ್ತು ಕಲಾತ್ಮಕ ಜೀವನದ ಜೀವಂತ ದಾಖಲೆಗಳಾಗಿವೆ ಎಂದು ಉಪನ್ಯಾಸದಲ್ಲಿ ವಿವರಿಸಲಾಯಿತು.

ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ನಿರ್ದೇಶಕಿ ಪ್ರೊ.ಎಂ.ಪುಷ್ಪಾವತಿ, ಮಾಜಿ ನಿರ್ದೇಶಕಿ ಡಾ.ವಿಜಯಲಕ್ಷ್ಮಿ ಬಸವರಾಜ್, ರಂಗಕರ್ಮಿಗಳಾದ ಪ್ರೊ.ಎಚ್.ಎಸ್.ಉಮೇಶ್, ರಾಮೇಶ್ವರಿವರ್ಮ, ಇಂದಿರಾ ನಾಯರ್, ರತ್ನಮಿರ್ಲೆ, ನಿರಂತರದ ನಿರ್ದೇಶಕರಾದ ಶ್ರೀನಿವಾಸ ಪಾಲಹಳ್ಳಿ, ಕೆಂಪರಾಜು, ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಕೆ.ಸಿ.ಬಸವರಾಜು, ಪ್ರೊ.ರಂಗರಾಜು, ಪತ್ರಕರ್ತರಾದ ಪಿ.ಓಂಕಾರ್, ರವೀಶ್, ಧನಂಜಯ ಇತರರು ಇದ್ದರು.