ಹೊಳೆನರಸೀಪುರ: ಹೆಣ್ಣು ಮಕ್ಕಳ ಜೀವನದ ನೈಜ ಘಟನೆಗಳನ್ನು ಎದೆಯ ಹಣತೆ ಕೃತಿಯಲ್ಲಿ ದಾಖಲಿಸಿರುವುದು ಬಾನು ಮುಷ್ತಾಕ್ ಅವರ ಪ್ರತಿಭೆಗೆ ಸಾಕ್ಷಿಯಾಗಿದೆ ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ಹೇಳಿದರು.
ಶನಿವಾರ ಸಂಜೆ ಪಟ್ಟಣದ ತಾಲೂಕು ಕಚೇರಿ ಮುಂಭಾಗದ ಸಾರ್ವಜನಿಕ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಎದೆಯ ಹಣತೆ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿಗೆ ಭಾಜನರಾದ ಬಾನು ಮುಷ್ತಾಕ್ ಅವರ ಕೃತಿ ಇಂದು ವಿಶ್ವದೆಲ್ಲಡೆ ಪ್ರಶಂಶೆಗೆ ಪಾತ್ರವಾಗಿರುವುದು ನಮಗೆಲ್ಲ ಹೆಮ್ಮೆ ಎನಿಸಿದೆ. ಕೃತಿಯಲ್ಲಿರುವ ಘಟನಾವಳಿಗಳನ್ನು ದೃಶ್ಯಗಳ ಮೂಲಕ ನಾಟಕ ರೂಪದಲ್ಲಿ ಹೆಗ್ಗೊಡಿನ ಕರ್ನಾಟಕ ಸತ್ಯಶೋಧನಾ ರಂಗ ಸಮುದಾಯದ ಕಲಾವಿದರು ಪ್ರಸ್ತುತ ಪಡಿಸುತ್ತಿರುವುದು ಶ್ಲಾಘನೀಯ ಎಂದರು.
ಬಾನು ಮುಷ್ತಾಕ್ ಅವರ ಜನಪರ ಕಾಳಜಿ ಅನನ್ಯ. ಕೃತಿಯಲ್ಲಿ ಮಹಿಳೆಯರ ಮನಸ್ಸಿನಲ್ಲಿರುವ ತವಕ ತಲ್ಲಣಗಳನ್ನು ಬಿಡಿಸಿ ಹೇಳಿದ್ದಾರೆ ಎಂದರು.
ಬಾನು ಮುಷ್ತಾಕ್ ಅವರು ತಮ್ಮ ಕೃತಿಯಲ್ಲಿ ಹದಿಮೂರು ಅಂಶಗಳುಳ್ಳ ಕಥೆಗಳನ್ನು ಪರಿಪೂರ್ಣವಾಗಿ ವಿವರಿಸಿದ್ದಾರೆ. ಇಂತಹ ಕೃತಿ ಜನಮನ್ನಣೆ ಪಡೆದಿರುವುದು ಅವರ ಬರಹಕ್ಕೆ ಸಿಕ್ಕ ಗೌರವವಾಗಿದೆ ಎಂದರು.
ಈ ನಾಟಕ ಮುಂದೆ ಬೃಹತ್ ಮಟ್ಟದಲ್ಲಿ ದೊಡ್ಡದಾಗಿ ಪ್ರದರ್ಶನ ನಡೆಸಲು ರಂಗ ಸಮುದಾಯದ ನಟರೊಂದಿಗೆ ಮಾಡಿಸೋಣ. ಇದಕ್ಕೆ ನಾವು ಸಹ ಕೈಗೂಡಿಸುತ್ತೇವೆ. ಜಿಲ್ಲಾಡಳಿತದಿಂದಲೂ ಸಹಕಾರ ನೀಡುವುದಾಗಿ ತಿಳಿಸಿದರು.
ಡಿವೈಎಸ್‌ಪಿ ಶಾಲು ಮಾತನಾಡಿದರು. ಪತ್ರಕರ್ತ ಎಚ್.ವಿ.ಸುರೇಶ್‌ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ವೈ.ಚಂದ್ರಶೇಖರ್, ದಲಿತ ಸಂಘರ್ಷ ಸಮಿತಿ ಮುಖಂಡ ಸಂದೇಶ್ ಇತರನ್ನೊಳಗೊಂಡ ತಂಡ ನಾಟಕ ಪ್ರದರ್ಶನ ಮಾಡಿದರು.
ಮಾದಿಗ ದಂಡೋರ ರಾಜ್ಯ ಕಾರ್ಯದರ್ಶಿ ವಿಜಯಕುಮಾರ್, ದಲಿತ ಸಂಘರ್ಷ ಸಮಿತಿ ರಾಜ್ಯಸಂಚಾಲಕ ಎಂ.ಸೋಮಶೇಖರ್, ಪುರಸಭೆ ಅಧ್ಯಕ್ಷ ಪ್ರಸನ್ನ, ವೃತ್ತನಿರೀಕ್ಷಕ ಪ್ರದೀಪ್‌ಕುಮಾರ್, ತಾಲೂಕು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಚಿನ್ನಸ್ವಾಮಿ ಇತರರು ಇದ್ದರು.