ಮುಂಡಗೋಡ: ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಯಾವುದೇ ವಿಷಯದ ಕುರಿತು ಗಂಭೀರವಾಗಿ ಚರ್ಚೆ ನಡೆಯದೆ ಹಗುರವಾಗಿ ಪರಿಗಣಿಸಲಾಗುತ್ತಿದೆ. ವಾರ್ಡ್ನಲ್ಲಿನ ಕೆಲಸಕ್ಕೆ ಸದಸ್ಯರೆ ಬೇಡಿಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಪಪಂ ಸದಸ್ಯೆ ನಿರ್ಮಲಾ ಬೆಂಡ್ಲಗಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ಪಪಂ ಸಭಾಭವನದಲ್ಲಿ ಅಧ್ಯಕ್ಷೆ ಜಯಸುಧಾ ಭೋವಿವಡ್ಡರ ಅಧ್ಯಕ್ಷತೆಯಲ್ಲಿ ಬುಧವಾರ ಕರೆಯಲಾಗಿದ್ದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ನಮ್ಮ ಅವಧಿಯಲ್ಲಿ ಐವರು ಮುಖ್ಯಾಧಿಕಾರಿಗಳು ಬದಲಾದರೂ ಸಮಸ್ಯೆಗಳನ್ನು ಬಗೆಹರಿಸಿಲ್ಲ ಎಂದು ಸದಸ್ಯೆ ನಿರ್ಮಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯವೈಖರಿಗೆ ಅಸಮಧಾನ ಹೊರಹಾಕಿದರು.
ಪಟ್ಟಣ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳುವಂತೆ ತಿಳಿಸಿ ತಿಂಗಳುಗಳೇ ಕಳೆದರೂ ಈವರೆಗೂ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಿಲ್ಲ. ಇದರಿಂದ ಸಾರ್ವಜನಿಕರು ಗುಂಡಿಗಳನ್ನು ಮುಚ್ಚಲು ಯೋಗ್ಯತೆ ಇಲ್ಲವೆ ಎಂದು ಪ್ರಶ್ನಿಸುತ್ತಿದ್ದು, ಇದಕ್ಕೆ ಏನು ಉತ್ತರಿಸುವುದು ಎಂದು ಸದಸ್ಯ ಅಶೋಕ ಚಲವಾದಿ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.
ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರಸ್ಥರ ವಿಷಯಕ್ಕೆ ಸಂಬಂಧಪಟ್ಟಂತೆ ಫುಟ್ಪಾತ್ ಮೇಲಿನ ಅಂಗಡಿ, ತಳ್ಳುವ ಗಾಡಿಗಳನ್ನು ತೆರವುಗೊಳಿಸಿ ಪ.ಪಂ ಆವರಣದಲ್ಲಿ ಇಡಲಾಗಿತ್ತು. ಆದರೆ, ಕೆಲ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದರಿಂದ ಮತ್ತೆ ಗಾಡಿಗಳನ್ನು ಮರಳಿ ನೀಡಿ ಯಾವುದೇ ಕ್ರಮಕ್ಕೂ ಮುಂದಾಗಿಲ್ಲ ಎಂದು ಸಿಬ್ಬಂದಿ ವಿವೇಕ ಪಾಟೀಲ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಫಣಿರಾಮ ಹದಳಗಿ, ಬೀದಿ ಬದಿ ವ್ಯಾಪಾರಸ್ಥರಿಗೆ ವಿವೇಕಾನಂದ ಬಯಲು ರಂಗಮಂದಿರದಲ್ಲಿ ವ್ಯಾಪಾರಕ್ಕೆ ಅವಕಾಶ ಕೊಟ್ಟರು ಬರುತ್ತಿಲ್ಲ. ಬಸ್ ನಿಲ್ದಾಣ ಎದುರು, ಶಿವಾಜಿ ಸರ್ಕಲ್ ಬಳಿ ವ್ಯಾಪಾರಕ್ಕೆ ಅವಕಾಶ ಕೇಳುತ್ತಾರೆ. ಸದಸ್ಯರ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಸಮಸ್ಯೆ ಉಂಟಾಗುತ್ತಿದೆ ಎಂದು ಹೇಳಿದರು. ಬೀದಿ ಬದಿ ವ್ಯಾಪಾರಸ್ಥರ ಸಭೆ ಕರೆದು ಫುಟ್ಪಾತ್ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುವುದಾಗಿ ಮುಖ್ಯಾಧಿಕಾರಿ ಸಂತೋಷ ಕುಮಾರ ಹೇಳಿದರು.
ಪಟ್ಟಣದಲ್ಲಿರುವ 5 ಶುದ್ಧ ಕುಡಿಯುವ ನೀರಿನ ಘಟಕದ ಯಾವುದೇ ಲೆಕ್ಕಾಚಾರವೆ ಇಲ್ಲದಂತಾಗಿ ಆದಾಯವು ತಿಳಿಯದಂತಾಗಿದೆ ಎಂದು ಸದಸ್ಯ ವಿಶ್ವನಾಥ ಪವಾಡಶೆಟ್ಟರ ಸಭೆಯ ಗಮನಕ್ಕೆ ತಂದರು. ಈ ಕುರಿತು ಪರಿಶೀಲನೆ ಮಾಡಿ ಅಗತ್ಯ ಕ್ರಮಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ಸಂತೋಷ ಕುಮಾರ ತಿಳಿಸಿದರು.
ಕಲಾಲ ಓಣಿಯಲ್ಲಿರುವ ಹೆಣ್ಣು ಮಕ್ಕಳ ಉರ್ದು ಶಾಲೆಯ ಬಳಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮೂತ್ರಾಲಯ ನಿರ್ವಣಕ್ಕೆ ಅವಕಾಶ ನೀಡಬಾರದು ಎಂದು ಸದಸ್ಯೆ ಕುಸುಮಾ ಹಾವಣಗಿ ವಿರೋಧ ವ್ಯಕ್ತಪಡಿಸಿದರು. ಶಾಲೆ ಬಳಿ ಹೈಟೆಕ್ ಮೂತ್ರಾಲಯ ಮಾಡುವುದಾಗಿ ಅಧಿಕಾರಿಗಳು ತಿಳಿಸಿದಾಗ, ಹೈಟೆಕ್ ಮೂತ್ರಾಲಯ ಮಾಡುವುದಾದರೆ ಯಾವುದೇ ವಿರೋಧವಿಲ್ಲ ಎಂದು ತಿಳಿಸಿದರು.</p><p> ಉಪಾಧ್ಯಕ್ಷೆ ರಹಿಮಾಬಾನು ಕುಂಕೂರ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಸುಬ್ಬಾಯವರ, ಸದಸ್ಯರಾದ ಶಕುಂತಲಾ ನಾಯಕ, ಬಿಬಿಜಾನ ಮುಲ್ಲಾನವರ, ಸಿಬ್ಬಂದಿ ಇದ್ದರು.
ಇಲ್ಲಿನ ಪ.ಪಂ.ಗೆ ಹೊಸದಾಗಿ ಬಂದಿರುವುದರಿಂದ ಇಲ್ಲಿನ ಅಗು ಹೋಗುಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಹಾಗಾಗಿ ಎಲ್ಲ ಸದಸ್ಯರು ಸಲಹೆ ಸೂಚನೆಗಳನ್ನು ನೀಡಿ ಸಹಕಾರ ನೀಡಿದರೆ ಉತ್ತಮ ಆಡಳಿತ ನಡೆಸಲು ಅನುಕೂಲವಾಗಲಿದೆ ಎಂದು ನೂತನ ಮುಖ್ಯಾಧಿಕಾರಿ ಸಂತೋಷ ಕು ಮಾರ ತಿಳಿಸಿದರು.