ಜಿಲ್ಲೆ

ವಿಪಕ್ಷಗಳನ್ನೇ ಪ್ರಶ್ನಿಸುವ ದುಸ್ಥಿತಿ ರಾಜ್ಯದಲ್ಲಿ ನಿರ್ಮಾಣ

ಗಂಗಾಧರ ಬಿ ವಿ

ಚನ್ನಪಟ್ಟಣ: ರಾಜ್ಯದಲ್ಲಿ ಆಡಳಿತ ಪಕ್ಷವೇ ವಿಪಕ್ಷಗಳನ್ನು ಪ್ರಶ್ನೆ ಮಾಡುವ ಪರಿಸ್ಥಿತಿ ಬಂದಿದೆ. ರಾಜ್ಯಸರ್ಕಾರ ರಾಜ್ಯದ ಜನತೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.

ತಾಲೂಕಿ‌ನ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂದರ್ಭ ಬಂದರೆ ಕುಮಾರಸ್ವಾಮಿ ಬಂಧನ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಲೋಕಸಭಾ ಚುನಾವಣೆ ಬಳಿಕ ಹಳೇ ಮೈಸೂರು ಭಾಗದ ಫಲಿತಾಂಶ ಕಾಂಗ್ರೇಸ್ ನಿದ್ದೆಗೆಡಿಸಿದೆ. ಹಾಸನ ಹೊರತುಪಡಿಸಿ ಬಹುತೇಕ ಕ್ಷೇತ್ರಗಳು ಮೈತ್ರಿ ಪಕ್ಷದ ಪಾಲಾಗಿದೆ. ರಾಜ್ಯದ ಜನತೆ ಕುಮಾರಸ್ವಾಮಿ ಅವರಿಗೆ ಶಕ್ತಿ ತುಂಬಿದ್ದಾರೆ. ಬಹುಶಃ ಇದು ಕಾಂಗ್ರೆಸ್ ನವರಿಗೆ ಹತಾಶೆ ತರಿಸಿದೆ. ಹಾಗಾಗಿ ಈ ರೀತಿಯ ಹೇಳಿಕೆ ಕೊಡತ್ತಿದ್ದಾರೆ ಎಂದರು.

ಗಣಿಗಾರಿಕೆ ಅನುಮತಿ ವಿಚಾರಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರು ಯಾವುದೇ ಕಡತಕ್ಕೂ ಸಹಿ ಹಾಕಿಲ್ಲ. ಈ  ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ಇರುವ ಹಿನ್ನೆಲೆಯಲ್ಲಿ ಪ್ರಾಸಿಕ್ಯೂಷನ್ ಕೊಡುವ ಅಗತ್ಯ ಇಲ್ಲ. ಇದು ಕೇವಲ ರಾಜಕೀಯ ಷಡ್ಯಂತ್ರ. ರಾಜ್ಯದ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದರು.

ವೆಂಕಟೇಶ್ವರ ಮೈನಿಂಗ್ ಗೆ ಕುಮಾರಸ್ವಾಮಿ ಅನುಮತಿ ಕೊಟ್ಟರು ಎಂಬ ಆರೋಪವಿದೆ. ಈ ಬಗ್ಗೆ 2017ರಲ್ಲೇ ಕುಮಾರಣ್ಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ‌. ಸುಪ್ರೀಂಕೋರ್ಟ್ ಎಸ್ಐಟಿ, ಲೋಕಾಯುಕ್ತಕ್ಕೆ ಡೈರೆಕ್ಷನ್ ಕೊಟ್ಟಮೇಲೆ ಪ್ರಾಸಿಕ್ಯೂಷನ್ ಗೆ ಯಾಕೆ ಅನುಮತಿ ಕೊಡಬೇಕು ಎಂದು ಪ್ರಶ್ನಿಸಿದರು‌‌. ರಾಜ್ಯ ಸರ್ಕಾರದಲ್ಲಿ ನಡೆದಿರುವ  ಮೂಡಾ ಹಾಗೂ ವಾಲ್ಮೀಕಿ ಹಗರಣದ ಬಗ್ಗೆ ನಾವು ಪಾದಯಾತ್ರೆ ಮಾಡಿದ್ದೇವು. ಇದರ ದಿಕ್ಕು ತಪ್ಪಿಸಲು ಸರ್ಕಾರ ಯತ್ನಿಸುತ್ತಿದೆ ಎಂದು ದೂರಿದರು.

ಡಿಕೆಶಿಗೆ ತಿರುಗೇಟು!

ಬೆಂಗಳೂರು ನಾಗರೀಕರ ಬಗ್ಗೆ ಡಿಸಿಎಂ ಲಘುವಾಗಿ ಮಾತನಾಡಿದ್ದಾರೆ. ಬೆಂಗಳೂರಿಗರಿಗೆ ಉಪಕಾರ ಸ್ಮರಣೆ ಇಲ್ಲ ಎಂದಿದ್ದಾರೆ. ಅವರಿಗೆ ನಾನು ಒಂದು ಪ್ರಶ್ನೆ ಕೇಳ್ತುತ್ತೇನೆ, 136 ಜನ ಶಾಸಕರನ್ನು ಗೆಲ್ಲಿಸಿದಾಗ ಉಪಕಾರ ಸ್ಮರಣೆ ಇತ್ತಾ.? ಬೆಂಗಳೂರಿನಲ್ಲಿ 12 ಮಂದಿ ನಿಮ್ಮ ಪಕ್ಷದ ಶಾಸಕರನ್ನು ಗೆಲ್ಲಿಸಿದಾಗ ಉಪಕಾರ ಸ್ಮರಣೆ ಇತ್ತಾ.? ಜನಾಭಿಪ್ರಾಯ‌ ನಿಮ್ಮ ಜೊತೆಯಲ್ಲಿ ಇದ್ದಾಗ ಎಲ್ಲವೂ ಸರಿ, ಲೋಕಸಭಾ ಚುನಾವಣೆ ಬಳಿಕ ಈ ರೀತಿಯ ಲಘುವಾಗಿ ಮಾತನಾಡೋದು ಅವರ ಸ್ಥಾನಕ್ಕೆ ಶೋಭೆ ತರಲ್ಲ.

ಜನ ಆಶಿರ್ವಾದ ಮಾಡಿದ್ದಾರೆ, ಅದಕ್ಕೆ ತಕ್ಕನಾಗಿ ನಡೆದುಕೊಳ್ಳಿ. ಇಲ್ಲವಾದಲ್ಲಿ, ಮುಂದಿನ ದಿನಗಳಲ್ಲಿ ನಿಮ್ಮ 136 ಸ್ಥಾನ ಎಲ್ಲಿಗೆ ಬಂದು ನಿಲ್ಲುತ್ತೆ ನೋಡಿಕೊಳ್ಳಿ ಎಂದು ಡಿಸಿಎಂ ಡಿಕೆಶಿಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದರು.

ರಾಜ್ಯದ ಡಿಸಿಎಂ ನೀರಿನ ದರ ಏರಿಕೆ ಬಗ್ಗೆ ಮಾತನಾಡಿದ್ದಾರೆ.ಬಕಳೆದ 10ವರ್ಷಗಳಿಂದ ಬಿಡಬ್ಲ್ಯೂಎಸ್ಎಸ್ಡಿ ಸಂಕಷ್ಟದಲ್ಲಿದೆ. ಅದಕ್ಕೆ ಶಕ್ತಿ ತುಂಬಲು ದರ ಏರಿಕೆ ಮಾಡುತ್ತೇವೆ ಅಂದಿದ್ದಾರೆ. ಈಗಾಗಲೇ ರಾಜ್ಯದ ಜನತೆಗೆ ಒಂದುಕಡೆ ಪೆಟ್ರೋಲ್, ಡೀಸೆಲ್‌ ದರ ಏರಿಕೆ ಬರೆಯಾಗಿದೆ. ಮತ್ತೊಂದೆಡೆ ಹಾಲಿನ ದರ ಏರಿಕೆ ಮಾಡಲಾಗಿದೆ. ರೈತರಿಗೆ ಹಾಲಿನ ಪ್ರೋತ್ಸಾಹ ಧನವನ್ನೂ ಸಹ ಕೊಡುತ್ತಿಲ್ಲ ಎಂದು ದೂರಿದರು.