ಮಡಿಕೇರಿ: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ಗಳಿಸಿ ಹೆಸರು ಮಾಡಿರುವ ಕೊಡಗಿನ ನಿರ್ದೇಶಕಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಅವರ ನಿರ್ದೇಶನದಲ್ಲಿ ಮತ್ತೊಂದು ಕನ್ನಡ ಚಿತ್ರ ತೆರೆಗೆ ಬರಲಿದೆ.
ಸ್ವಸ್ತಿಕ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ನಿರ್ಮಾಣ ಮತ್ತು ನಿರ್ದೇಶನದ ಬಹು ನಿರೀಕ್ಷಿತ ಕೌಮುದಿ ಕನ್ನಡ ಚಲನಚಿತ್ರಕ್ಕೆ ಕನಕಪುರದ ಶ್ರೀ ಬಿಸಿಲು ಮಾರಮ್ಮ ದೇವಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮುಹೂರ್ತ ನೆರವೇರಿಸಲಾಯಿತು.
ಪ್ರಶಸ್ತಿ ವಿಜೇತ ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರು ಈ, ಸಹ ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಕಲನ ಎನ್.ನಾಗೇಶ್, ಛಾಯಾಗ್ರಹಣ ಪಿವಿಆರ್ ಸ್ವಾಮಿ ಗೂಗಾರೆದೊಡ್ಡಿ, ಚಿತ್ರಕಥೆ ನಾಗೇಶ್.ಎನ್, ಎಸ್.ಹರೀಶ್ ಹಾಗೂ ಶ್ರೀ ಸುರೇಶ್ ಸಂಗೀತ ನೀಡಿದ್ದಾರೆ.
ತಾರಾಂಗಣದಲ್ಲಿ ಪ್ರಶಸ್ತಿ ವಿಜೇತ ನಟಿ, ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ, ನೀನಾಸಂ ನಟರಾಜ್, ಶ್ರೀಧರ್, ಪಿ.ಬಿ.ರಾಜು ನಾಯಕ, ರೋಹಿಣಿ, ಕುಮಾರಿ ಅಂಕಿತಾ, ಕುಮಾರಿ ದೀಪಿಕಾ, ಬಂಗಾರಶೆಟ್ಟಿ ಮತ್ತಿತರರು ಇದ್ದಾರೆ.
ವಿಶೇಷ ಪೂಜೆಯ ನಂತರ ಚಿತ್ರೀಕರಣ ಆರಂಭಿಸಿ ಮಾತನಾಡಿದ ನಿರ್ದೇಶಕಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್, ಕೌಮುದಿ ಚಿತ್ರ ತಮ್ಮ ನಿರ್ದೇಶನದ ಈ ಹಿಂದಿನ ಚಿತ್ರಗಳಿಗಿಂತ ವಿಭಿನ್ನವಾಗಿದೆ. ಶಿಕ್ಷಣ ಮತ್ತು ವೈಜ್ಞಾನಿಕ ಜ್ಞಾನದ ಕೊರತೆಯಿಂದ ಮೂಲ ನಂಬಿಕೆ ಹಾಗೂ ಮೂಢ ನಂಬಿಕೆಯ ವ್ಯತ್ಯಾಸ ತಿಳಿಯದೆ ಹೆಣ್ಣು ಮಕ್ಕಳನ್ನು ಅಪಾಯಕ್ಕೆ ದೂಡುವ ಸಂಪ್ರದಾಯ, ಆಚರಣೆಗಳ ಮೇಲೆ ಕೌಮುದಿ ಬೆಳಕು ಚೆಲ್ಲಲಿದೆ. ಇಂದಿನ ವಾಸ್ತವ ಸಮಾಜದ ಸುತ್ತ ಸಾಗುವ ಕಥೆ ಇದಾಗಿದ್ದು, ಮೌಢ್ಯದ ಕತ್ತಲಿನಲ್ಲಿರುವ ಕುಟುಂಬವನ್ನು ಬೆಳಕಿಗೆ ತರುವ ಪರಿಕಲ್ಪನೆ ಚಿತ್ರದಲ್ಲಿ ಅಡಗಿದೆ. ರಾಮನಗರ ಮತ್ತು ಕನಕಪುರ ಭಾಗದಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ವಿವರಿಸಿದರು.