ಮಡಿಕೇರಿ: ಕೂರ್ಗ್ ಕಾಫಿವುಡ್ ಮೂವಿಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ಮಿಸಿ, ನಿರ್ದೇಶಿಸಿರುವ ಕೊಡವ ಚಲನಚಿತ್ರ ಕಾಂಗತ ಮೂಡ್ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿತ್ತು.
ಮೂರ್ನಾಡಿನ ಬಿದ್ದಂಡ ಪೊನ್ನಪ್ಪರವರ ನಿವಾಸದಲ್ಲಿ ಆರಂಭಗೊಂಡ ಚಿತ್ರೀಕರಣವು ಕಳೆದ ೧೧ ದಿನಗಳಲ್ಲಿ ಕೊಡಗಿನ ವಿವಿಧೆಡೆ ಚಿತ್ರೀಕರಿಸಿ ಇದೀಗ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ.
ಚಿತ್ರೀಕರಣಕ್ಕೆ ಸಹಕರಿಸಿದ ಮೂರ್ನಾಡು ಕಾಂತೂರು ಗ್ರಾಮದ ಕಾಫಿ ಬೆಳೆಗಾರರಾದ ಬಿದ್ದಂಡ ಲೀಲಾ ಪೊನ್ನಪ್ಪ ಚಿತ್ರೀಕರಣ ಪೂರ್ಣಗೊಂಡ ಹಿನ್ನಲೆ ಕುಂಬಳಕಾಯಿ ಒಡೆದು, ಮಾತನಾಡಿ ಕಾಂಗತ ಮೂಡ್ ಚಿತ್ರ ಕೊಡಗು ಸೇರಿದಂತೆ ಎಲ್ಲೆಡೆ ಉತ್ತಮ ಪ್ರದರ್ಶನ ಕಂಡು ಯಶಸ್ವಿಯಾಗಲಿ ಎಂದು ಚಿತ್ರತಂಡಕ್ಕೆ ಶುಭಹಾರೈಸಿದರು.
ಚಿತ್ರದ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಮಾತನಾಡಿ, ಕೊಡವ ಭಾಷೆಯ ಉಳಿವು, ಜನರಿಗೆ ಹಾಗೂ ಸಮಾಜಕ್ಕೆ ಕೊಡವ ಸಂಸ್ಕೃತಿ, ಆಚಾರ, ವಿಚಾರಗಳನ್ನು ತಲುಪಿಸುವ ನಿಟ್ಟಿನಲ್ಲಿ ವರ್ಷಂಪ್ರತಿ ಕೊಡವ ಸಿನಿಮಾವನ್ನು ನಮ್ಮ ತಂಡದೊಂದಿಗೆ ನಿರ್ಮಿಸಲಾಗುತ್ತಿದ್ದು, ಕೊಡಗಿನಾದ್ಯಂತ ಜನರು ಉತ್ತಮ ಸಹಕಾರ ನೀಡುತ್ತಿದ್ದಾರೆ. ಮುಂದೆಯೂ ಇದೇ ರೀತಿ ತಮ್ಮ ಬೆಂಬಲ ಇರಲಿ ಎಂದರು.
ಕಾಂಗತ ಮೂಡ್ ಚಿತ್ರ ಚೆನ್ನಾಗಿ ಮೂಡಿ ಬಂದಿದ್ದು ಚಿತ್ರ ತಂಡದ ಕಲಾವಿದರು ಹಾಗೂ ತಂತ್ರಜ್ಞರಿಗೆ ಧನ್ಯವಾದಗಳನ್ನು ಸಲ್ಲಿಸಿ, ಶೀಘ್ರದಲ್ಲೆ ಸಿನಿಮಾವನ್ನು ಪ್ರದರ್ಶನ ಮಾಡಲಾಗುವುದು ಎಂದು ಹೇಳಿದರು.
ಸಹ ನಿರ್ಮಾಪಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಮಾತನಾಡಿ, ಚಿತ್ರೀಕರಣವನ್ನು ನಿಗಧಿತ ಸಮಯದಲ್ಲಿ ಪೂರ್ಣಗೊಳಿಸಲು ಸಹಕರಿಸಿದ ಸರ್ವರಿಗೂ ಧನ್ಯವಾದಗಳನ್ನು ಸಲ್ಲಿಸಿ ಹರ್ಷ ವ್ಯಕ್ತಪಡಿಸಿದರು.
ಚಿತ್ರದ ಸಹ ನಿರ್ದೇಶಕಿ ಈರಮಂಡ ಹರಣಿ ವಿಜಯ್ ಮಾತನಾಡಿ, ನಿರ್ದೇಶಕ ಪ್ರಕಾಶ್ ಕಾರ್ಯಪ್ಪ ಅವರು, ವರ್ಷದಿಂದ ವರ್ಷಕ್ಕೆ ಉತ್ತಮ ಸಿನಿಮಾಗಳನ್ನು ನಿರ್ಮಿಸಿ ಜನರಿಗೆ ತಲುಪಿಸುವ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ಸಿನಿಮಾವು ಪ್ರಸ್ತುತ ವಿದ್ಯಾಮಾನದಲ್ಲಿ ಕೊಡಗು ಕಾಣುತ್ತಿರುವ ಸಮಸ್ಯೆಗಳನ್ನು ಒಳಗೊಂಡಿದ್ದು, ಸಿನಿಮಾ ಬಿಡುಗಡೆಗೊಂಡ ನಂತರ ಉತ್ತಮ ಪ್ರತಿಕ್ರಿಯೆ ದೊರೆಯುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.