ಜಿಲ್ಲೆ

ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಲಿ ಮಹಿಳೆಯರ ಪಾಲು

ಶಿರಸಿ: ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಪಾಲು ಹೆಚ್ಚಿದರೆ ಸಮಾಜವೂ ಸುಧಾರಿಸುತ್ತದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ತಾಲೂಕಿನ ಬನವಾಸಿಯಲ್ಲಿ ಸರ್ಕಾರಿ ಪದವಿಪೂರ್ವ ಮಹಾ ವಿದ್ಯಾಲಯದಲ್ಲಿ ನೂತನ ಕೊಠಡಿಗಳು, ಕಂಪ್ಯೂಟರ್ ಶಿಕ್ಷಣಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಗತಿ ಹೊಂದಿದ ರಾಷ್ಟ್ರಗಳಲ್ಲಿ ಮಹಿಳಾ ಉದ್ಯೋಗ ಪ್ರಮಾಣ ಶೇ. 50ಕ್ಕಿಂತ ಜಾಸ್ತಿ ಇವೆ. ಆದರೆ, ಭಾರತದಲ್ಲಿ ಈ ಪ್ರಮಾಣ ಶೇ. 16ರಷ್ಟು ಮಾತ್ರ ಇದ್ದು, ಉಳಿದ ಮಹಿಳೆಯರು ವಿದ್ಯೆ ಕಲಿತಿದ್ದರೂ ಅವಕಾಶ ವಂಚಿತರಾಗಿ ಮನೆಯಲ್ಲಿ ಇರುವಂತಾಗಿದೆ. ಹೆಣ್ಣು ಮಕ್ಕಳಿಗೆ ವಿದ್ಯೆ ನೀಡಬೇಕಾದ ಅನಿವಾರ್ಯ ಕಾಲಘಟ್ಟದಲ್ಲಿದ್ದೇವೆ. ಯಾವುದೇ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳಿಗೆ ಆದ್ಯತೆ ನೀಡಿದರೆ ಆ ಕ್ಷೇತ್ರ ಸುಧಾರಿಸುತ್ತದೆ. ಒಂದು ಕಾಲದಲ್ಲಿ ಹೆಣ್ಮಕ್ಕಳ ಬಗ್ಗೆ ಕೀಳರಿಮೆ ಇತ್ತು. ಇಂದು ಯುದ್ಧ ವಿಮಾನವನ್ನೂ ಮಹಿಳೆಯರು ಓಡಿಸುತ್ತಾರೆ ಎಂದರು.

ಬನವಾಸಿ ಭಾಗದಲ್ಲಿ ಪಿಯು ಕಾಲೇಜ್ ಆರಂಭಿಸಿರುವುದರಿಂದ ಕೇವಲ ನಮ್ಮ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಹಾನಗಲ್ಲ, ಸೊರಬ ತಾಲೂಕು ವಿದ್ಯಾರ್ಥಿಗಳಿಗೂ ಪ್ರಯೋಜನವಾಗುತ್ತಿದೆ. ಪ್ರತಿ ದಿನ ಬಸ್ ಏರಿ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಇಲ್ಲಿಯೇ 100 ವಿದ್ಯಾರ್ಥಿನಿಯರು ಉಳಿದುಕೊಳ್ಳಬಹುದಾದ ಹಾಸ್ಟೆಲ್ ನಿರ್ವಣಕ್ಕೆ ಬೇಡಿಕೆ ಇದ್ದು, ಮುಂದಿನ ದಿನಗಳಲ್ಲಿ ಮಂಜೂರು ಮಾಡಿಸಲಿದ್ದೇನೆ ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ಇಲ್ಲಿಯ ಗುಡ್ನಾಪುರ ಕೆರೆ ಹಾಗೂ ವರದಾ ನದಿಯಲ್ಲಿ ಹರಿವು ಹೆಚ್ಚಿದ್ದರಿಂದ ಶಾಸಕರು ಬಾಗಿನ ಅರ್ಪಿಸಿದರು.

ಬನವಾಸಿ ಗ್ರಾಪಂ ಅಧ್ಯಕ್ಷೆ ಆಯೇಷಾ ಬೀಬಿ, ಉಪಾಧ್ಯಕ್ಷ ಸಿದ್ದವೀರಪ್ಪ ನರೇಗಲ್, ರಹಮತ್ ಬಿ., ಸಿದ್ದಲಿಂಗಪ್ಪ ಉಗ್ರಾಣದ, ಸತೀಶ ಜಹಗೀರದಾರ, ಪ್ರಕಾಶ ಬಂಗ್ಲೆ, ಪೂರ್ಣಿಮಾ ಪಿಳ್ಳೆ, ಶಂಕರ ಗೌಡ, ಚೆನ್ನಬಸಪ್ಪ ಹಾವಣಗಿ, ದ್ಯಾಮಣ್ಣ ದೊಡ್ಮನಿ, ಬಸವರಾಜ ದೊಡ್ಮನಿ, ಇತರರಿದ್ದರು.