ಚನ್ನರಾಯಪಟ್ಟಣ: ಕಾಯಕ, ದಾಸೋಹ ಹಾಗೂ ವಚನಗಳ ಮೂಲಕ ಸಮಾಜವನ್ನು ಶರಣರು ತಿದ್ದುತ್ತಿದ್ದರಿಂದ ಅವರನ್ನು ಪಂಚಕರ್ಮರು ಅಂತ ಕರೆಯಲಾಗುತ್ತಿತ್ತು ಎಂದು ತಾಲೂಕು ದಂಡಾಧಿಕಾರಿ ವಿ.ಎಸ್.ನವೀನ್ ಕುಮಾರ್ ತಿಳಿಸಿದರು.
ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಸೋಮವಾರ ಆಯೋಜಿಸಿದ್ದ ಕಾಯಕ ಶರಣರ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಕಾಯಕ ಶರಣರು ಎಂದು ಕರೆಯಿಸಿಕೊಳ್ಳುವ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿ ಕಾಯಕದಿಂದ ಗುರುತಿಸಿಕೊಂಡವರು. ಕಾಯಕದ ಜಗದಲ್ಲಿ ಜಾತಿ ಇರಬಾರದು. ಯಾವ ಕಾಯಕವೂ ದೊಡ್ಡದಲ್ಲ. ಮನಸ್ಸಿನಿಂದ ಮಾಡುವ ಯಾವ ಕಾಯಕವೂ ಸಣ್ಣದಲ್ಲ ಎಂದು ಸಾರಿದ ಮಹಾನುಭಾವರು ಈ ಕಾಯಕ ಶರಣರು ಎಂದರು.
ಮಾದಾರ ಚನ್ನಯ್ಯ ಅವರು ಬಸವಣ್ಣರಿಗಿಂತ ಹಿರಿಯರಾಗಿದ್ದು, ಚರ್ಮದ ಚಪ್ಪಲಿ ಹೊಲೆಯುವ ಕಾಯಕ ಮಾಡುತ್ತಿದ್ದರು. ಇವರು ತಮ್ಮ ಕಾಯಕದಿಂದಲೇ ಶಿವನನ್ನು ಒಲಿಸಿಕೊಂಡು, ಅಂಬಲಿಯನ್ನು ಸೇವೆಗೆ ನೀಡಿದ್ದ ಮಹಾನ್ ಕಾಯಕಯೋಗಿ. ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಅಸಮಾನತೆಗಳನ್ನು ದೂರ ಮಾಡುವಲ್ಲಿ ಮಾದಾರ ಚನ್ನಯ್ಯ ಅಗ್ರಗಣ್ಯರು ಎಂದು ಹೇಳಿದರು.
ಮಾದಾರ ಧೂಳಯ್ಯ ಒಬ್ಬ ಪ್ರಖರ ವಚನಕಾರ. ಒಟ್ಟು 300ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಢೋಹರ ಕಕ್ಕಯ್ಯ ಬರೆದ ಒಟ್ಟು ವಚನಗಳಲ್ಲಿ ಸಿಕ್ಕಿದ್ದು ಆರು ಮಾತ್ರ. ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿ ಮಹಾನ್ ವ್ಯಕ್ತಿಗಳಾಗಿದ್ದರು. ಸಮಗಾರ ಹರಳಯ್ಯ ಒಟ್ಟು 366 ವಚನಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರೇಡ್-2 ತಹಸೀಲ್ದಾರ್ ನಾಗರಾಜು, ಶಿರಸ್ತೇದಾರ್ ಪವನ್, ಪೂರ್ಣಿಮಾ, ಕರ್ನಾಟಕ ದಲಿತ ಸೇನಾ ಪಡೆಯ ಜಿಲ್ಲಾಧ್ಯಕ್ಷ ದಂಡೋರ ಮಂಜುನಾಥ್, ಸಮಾಜ ಸೇವಕ ರಾಮಚಂದ್ರ ಇತರರು ಭಾಗವಹಿಸಿದ್ದರು.