ಜಿಲ್ಲೆ

ಗೃಹ  ರಕ್ಷಕ ದಳದ  ಸಿಬ್ಬಂದಿ ಸೇವೆ ಸ್ಮರಣೀಯ

ಲಕ್ಷ್ಮೇಶ್ವರ: ಸಮಾಜದಲ್ಲಿ ಪೊಲೀಸ್ ಇಲಾಖೆಯ ಸಹಕಾರದಿಂದ ಗೃಹ ರಕ್ಷಕದಳದ ಸಿಬ್ಬಂದಿ ಪ್ರಾಮಾಣಿಕತೆ ಮತ್ತು ಶ್ರದ್ಧೆಯಿಂದ ಕರ್ತವ್ಯ ಮಾಡುತ್ತಿದೆ. ಹೀಗಾಗಿ ಇಲಾಖೆಗೆ ಉತ್ತಮ ಹೆಸರು ಬರಲು ಸಾಧ್ಯವಾಗಿದೆ ಎಂದು ಗೃಹ ರಕ್ಷಕದಳದ ಜಿಲ್ಲಾ ಬೋಧಕ ಕಿರಣಕುಮಾರ ಕಟಗಿ ಹೇಳಿದರು.

ಪಟ್ಟಣದ ಉಮಾವಿದ್ಯಾಲಯ ಹೈಸ್ಕೂಲ್ ಮೈದಾನದಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಗೆ ಸರ್ಕಾರದ ವತಿಯಿಂದ ನೀಡಲಾದ ಸಮವಸ್ತ್ರಗಳನ್ನು ವಿತರಿಸಿ ಅವರು ಮಾತನಾಡಿದರು.

‘ಸಮಾಜದಲ್ಲಿ ಎಲ್ಲರೊಂದಿಗೆ ಸಹಕಾರ, ಸಹಬಾಳ್ವೆಯೊಂದಿಗೆ ಸಾಮಾಜಿಕ ಬದ್ಧತೆ ತೋರುವದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಗೃಹರಕ್ಷಕ ದಳವು ಕಾರ್ಯ ಮಾಡುತ್ತಿದೆ. ಕರೊನಾದಂತಹ ಮಹಾಮಾರಿಯ ಅಲೆಯಲ್ಲಿ ಜೀವದ ಹಂಗು ತೊರೆದು ಆರೋಗ್ಯ, ಪುರಸಭೆ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಗೃಹರಕ್ಷಕದಳದ ಸಿಬ್ಬಂದಿ ಕೆಲಸ ಮಾಡಿರುವುದು ಹೆಮ್ಮೆಯ ಸಂಗತಿ ಎಂದರು.

ಘಟಕಾಧಿಕಾರಿ ಬಿ.ಎನ್. ಛಬ್ಬಿ ಮಾತನಾಡಿ, ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಇಲಾಖೆಯ ನಿಯಮಗಳಿಗನುಸಾರವಾಗಿ ಗೃಹರಕ್ಷಕ ದಳದ ಸಿಬ್ಬಂದಿ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿದೆ. ಸಿಬ್ಬಂದಿಗೆ ಯಾವುದಾದರು ಮಹತ್ವದ ದಿನಗಳಂದು ಮಾತ್ರ ಕರ್ತವ್ಯಕ್ಕೆ ಅವಕಾಶ ನೀಡಲಾಗುತ್ತಿದ್ದು ನಿತ್ಯವೂ ಸರದಿ ಪ್ರಕಾರ ಸಿಬ್ಬಂದಿಗೆ ಸೇವೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಕಮಾಂಡೆಂಟ್ ವಿಶ್ವನಾಥ ಗಲಗಲಿ, ಬಿ.ಎನ್. ಕುಂಬಾರ, ಎಸ್.ಕೆ. ಕಲ್ಮಠ, ಎಂ.ಎಸ್. ಬೂದಿಹಾಳ, ಎಸ್.ಬಿ. ಸವಣೂರ, ಎಂ.ಎಸ್. ಶಿರಹಟ್ಟಿ, ಬಿ.ಎಚ್. ಬೆಂತೂರ, ಎಸ್.ಎನ್. ಭಜಂತ್ರಿ ಇತರರಿದ್ದರು.