ವಿಜಯವಾಣಿ ವಿಶೇಷ ಮೈಸೂರು
ನಂ. 1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ಆಯೋಜಿಸಿದ್ದ ‘ನಾರಿ ನಿನಗೊಂದು ಸ್ಯಾರಿ’ ಸ್ಪರ್ಧೆಯ ಅದೃಷ್ಟಶಾಲಿಗಳನ್ನು ಲಕ್ಕಿ ಡಿಪ್ ಮೂಲಕ ಶುಕ್ರವಾರ ಆಯ್ಕೆ ಮಾಡಲಾಯಿತು.
ಮಹಿಳೆಯರಲ್ಲಿ ಪತ್ರಿಕೆ ಓದುವ ಹವ್ಯಾಸದ ಜತೆಗೆ, ಸಾಮಾನ್ಯ ಜ್ಞಾನ ವೃದ್ಧಿಸುವ ಉದ್ದೇಶದಿಂದ ಕಳೆದ ಆಗಸ್ಟ್ 15ರಿಂದ ಸೆಪ್ಟೆಂಬರ್ 30ರ ವರೆಗೆ ಒಟ್ಟು 45 ದಿನಗಳ ಕಾಲ ‘ವಿಜಯವಾಣಿ’ ಪತ್ರಿಕೆಯಲ್ಲಿ ನಾರಿ ನಿನಗೊಂದು ಸ್ಯಾರಿ ಸ್ಪರ್ಧೆ ಆಯೋಜಿಸಲಾಗಿತ್ತು.
ರಾಜ್ಯಾದ್ಯಂತ ನಡೆದ ಈ ಸ್ಪರ್ಧೆಯಲ್ಲಿ ಮಹಿಳೆಯರು ಅತಿ ಉತ್ಸಾಹದಿಂದ ಭಾಗವಹಿಸಿದ್ದರು. ಹೀಗಾಗಿ, ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 5ರಿಂದ 6 ಸಾವಿರದಷ್ಟು ಲಕ್ಕಿ ಡಿಪ್ ಪ್ರವೇಶಗಳು ಬಂದಿದ್ದವು. ತಮ್ಮ ಸುತ್ತಮುತ್ತಲ ಪ್ರದೇಶದ ಜತೆಗೆ ದೇಶ, ವಿದೇಶದ ವಿದ್ಯಮಾನಗಳನ್ನು ಪರಿಚಯಿಸುವುದು, ದಿನನಿತ್ಯದ ಆಗುಹೋಗುಗಳನ್ನು ತಿಳಿದುಕೊಂಡು ಪತ್ರಿಕೆ ಓದುವಂತೆ ಮಾಡುವುದು ಸ್ಪರ್ಧೆಯ ಉದ್ದೇಶವಾಗಿತ್ತು.
ಪತ್ರಿಕೆ ಕಾರ್ಯಕ್ಕೆ ಮೆಚ್ಚುಗೆ
‘ನಾರಿ ನಿನಗೊಂದು ಸ್ಯಾರಿ’ ಸ್ಪರ್ಧೆ ಆಯೋಜನೆ ಮೂಲಕ ‘ವಿಜಯವಾಣಿ’ ಜ್ಞಾನದೊಂದಿಗೆ ಕನ್ನಡ ಭಾಷಾಭಿಮಾನ ರೂಢಿಸಲು ಮುಂದಾಗಿದೆ. ಸ್ಪರ್ಧೆಯ ಹೆಸರಿನಲ್ಲಿ ಮಹಿಳೆಯರನ್ನು ಆಕರ್ಷಿಸುವ ಮೂಲಕ ಪತ್ರಿಕೆ ಓದಿ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಲು ಇದು ಸಹಕಾರಿ. ಇಂತಹ ಕಾರ್ಯಕ್ಕೆ ಕನ್ನಡಿಗರು ಸದಾ ಬೆಂಬಲ ನೀಡಬೇಕು ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಪತ್ರಿಕೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಅಡುಗೆ ಮನೆಯಲ್ಲಿ ಕಳೆದು ಹೋಗಬಾರದು
ಮಹಿಳೆಯರು ಕೆಲಸ, ಮಕ್ಕಳು, ಮನೆ ಎಂದು ಅಡುಗೆ ಮನೆಯಲ್ಲಿಯೇ ಕಳೆದು ಹೋಗಬಾರದು. ಬಿಡುವಿನ ಸಮಯದಲ್ಲಿ ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಅದಕ್ಕಾಗಿ ‘ವಿಜಯವಾಣಿ’ ಆಯೋಜಿಸಿದ್ದ ಸ್ಪರ್ಧೆ ಮೆಚ್ಚುವಂಥದ್ದು ಎಂದು ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತೆ ನಾಜೀಯಾ ಸುಲ್ತಾನಾ ಹೇಳಿದರು.
‘ವಿಜಯವಾಣಿ’ ನಗರದಲ್ಲಿ ಆಯೋಜಿಸಿದ್ದ ‘ನಾರಿ ನಿನಗೊಂದು ಸ್ಯಾರಿ’ ಲಕ್ಕಿ ಡಿಪ್ ಡ್ರಾ ಕಾರ್ಯಕ್ರಮದಲ್ಲಿ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಿದ ಬಳಿಕ ಅವರು ಮಾತನಾಡಿದರು.
ಇಂದಿನ ದಿನಮಾನದಲ್ಲಿ ಮಹಿಳೆಯರು ಕೆಲಸದಲ್ಲಿಯೇ ಕಳೆದು ಹೋಗುತ್ತಿದ್ದಾರೆ. ಹೊರಗೂ ದುಡಿಯುವ ಮಹಿಳೆಯಾದರಂತೂ ಬಿಡುವೇ ಇಲ್ಲದಂತಾಗಿರುತ್ತದೆ. ಮನೆ, ಮಕ್ಕಳು, ಕುಟುಂಬ ಎಂದು ಹಗಲು-ಇರುಳು ಕೆಲಸ ಮಾಡುತ್ತಲೇ ಇರುತ್ತಾಳೆ. ಇದರಿಂದ ಮಹಿಳೆಯರು ತಮ್ಮ ವೈಯಕ್ತಿಕ ಹವ್ಯಾಸ, ಸಮಾಜದ ಆಗುಹೋಗುಗಳನ್ನು ತಿಳಿದುಕೊಳ್ಳಲು ಸಮಯ ಇರುವುದಿಲ್ಲ ಎಂದರು.
ಆದರೆ ತಮ್ಮ ಪ್ರತಿಭೆ, ಜ್ಞಾನವನ್ನು ವೃದ್ಧಿಸಿಕೊಳ್ಳಲು ಯಾವುದಾದರೂ ಒಂದು ಹವ್ಯಾಸ ಇಟ್ಟುಕೊಳ್ಳಬೇಕು. ಬಿಡುವಿನ ಸಮಯದಲ್ಲಿ ಏನನ್ನಾದರೂ ಓದುವ ಮೂಲಕ ಜ್ಞಾನ ವೃದ್ಧಿಸಿಕೊಳ್ಳಬೇಕು. ಈ ದಿಸೆಯಲ್ಲಿ ವಿಜಯವಾಣಿ ಪತ್ರಿಕೆಯ ಸ್ಪರ್ಧೆ ಮಹಿಳೆಯರನ್ನು ಪ್ರೇರೇಪಿಸಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಕಾಯಕ ಮಾಡಬೇಕು, ಜ್ಞಾನ, ವಿಚಾರ ಹೆಚ್ಚಿಸಿಕೊಳ್ಳಬೇಕು ಎಂದು ಬಸವಾದಿ ಶರಣರು ಹೇಳಿದ್ದಾರೆ. ಹೇಳಿದ್ದನ್ನು ತಿಳಿದುಕೊಳ್ಳುವುದಕ್ಕಿಂತ ಓದಿ ತಿಳಿದುಕೊಳ್ಳುವುದರಿಂದ ಹೆಚ್ಚು ಮನದಟ್ಟಾಗುತ್ತದೆ. ಹಾಗಾಗಿ, ಓದುವ ಹವ್ಯಾಸ ಉತ್ತಮ ಎಂದರು.
ಸೀರೆ ನೆಪದಲ್ಲಿ ಜ್ಞಾನ ವಿಸ್ತಾರ
ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಪ್ರಿಯದರ್ಶಿನಿ ಮಾತನಾಡಿ, ಸೀರೆ ಎನ್ನುವುದು ಮಹಿಳೆಯರಿಗೆ ಅಚ್ಚುಮೆಚ್ಚು. ಸೀರೆಯ ನೆಪದಲ್ಲಿಯಾದರೂ ಹೊಸ ವಿಚಾರ ತಿಳಿದುಕೊಳ್ಳವ ಜತೆಗೆ, ಪತ್ರಿಕೆ ಓದುವಂತೆ ಮಾಡಿರುವ ವಿಜಯವಾಣಿ ಪ್ರಯತ್ನ ಶ್ಲಾಘನೀಯ ಎಂದರು.
ಇಂದಿನ ದಿನದಲ್ಲಿ ಮಹಿಳೆಯರು ಬಿಡುವು ಇದ್ದರೂ ಪತ್ರಿಕೆ ಓದದೆ ಮೊಬೈಲ್ ಫೋನ್, ಟಿವಿ ವೀಕ್ಷಣೆಯಲ್ಲಿ ಕಳೆದು ಹೋಗುತ್ತಿದ್ದಾರೆ. ಇಂಥ ಸಂದರ್ಭ ಮಹಿಳೆಯರನ್ನು ಪತ್ರಿಕೆ ಓದುವತ್ತ ವಿಜಯವಾಣಿ ಸೆಳೆಯುವ ಉತ್ತಮ ಯತ್ನ ಮಾಡುತ್ತಿದೆ ಎಂದರು.
ಸಬಲೀಕರಣವಾಗಲಿ
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕಿ ಧರಣಿ ಮಾತನಾಡಿ, ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಹಲವು ಯೋಜನೆಗಳು ಈಗ ಚಾಲ್ತಿಯಲ್ಲಿವೆ. ಎಸ್‌ಕೆಡಿಆರ್‌ಪಿ ಕೂಡ ಮಹಿಳಾ ಸಬಲೀಕರಣಕ್ಕೆ ಶ್ರಮಿಸುತ್ತಿದೆ. ವಿಜಯವಾಣಿ ಆಕರ್ಷಕ ಕೊಡುಗೆಗಳನ್ನು ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ತನ್ನದೇ ಕೊಡುಗೆ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಪ್ರದಾಯದ ಗೌರವ
ಸಮಾಜ ಸೇವಕಿ ಸವಿತಾ ಘಾಟ್ಕೆ ಮಾತನಾಡಿ, ಸೀರೆ ಎನ್ನುವುದು ಭಾರತೀಯ ಸಂಪ್ರದಾಯದ ಗೌರವ. ನಾವು ಯಾವುದೇ ಅತ್ಯಂತ ಬೆಲೆ ಬಾಳುವ ಬಟ್ಟೆ ಧರಿಸಿದರೂ ಸೀರೆಯುಟ್ಟಾಗ ಸಿಗುವ ಗೌರವ ಬೇರೆ ಇರುತ್ತದೆ. ಇಂಥ ಸಂಪ್ರದಾಯವನ್ನು ಪ್ರೋತ್ಸಾಹಿಸುವ ವಿಜಯವಾಣಿ ಕಾರ್ಯ ಮುಂದುವರಿಯಬೇಕು. ಓದುಗರು ಸದಾ ಪತ್ರಿಕೆಗೆ ಬೆಂಬಲ ನೀಡಬೇಕು ಎಂದು ಹೇಳಿದರು.
ವಿಷಯದ ಮೇಲೆ ಹಿಡಿತ ಸಾಧಿಸಿ
ನಗರಪಾಲಿಕೆ ಮಾಜಿ ಸದಸ್ಯ ಬಿ.ವಿ.ಮಂಜುನಾಥ್ ಮಾತನಾಡಿ, ಯಾವುದೇ ವಿಚಾರಗಳನ್ನು ಹೆಚ್ಚು ತಿಳಿದುಕೊಂಡಾಗ ವಿಷಯದ ಮೇಲೆ ಹಿಡಿತ ಸಾಧಿಸಿ ಜ್ಞಾನ ಬೆಳೆಸಿಕೊಳ್ಳಬಹುದು. ಇದರಿಂದ ಭಾಷೆಯೂ ಬೆಳೆಯಲು ಸಾಧ್ಯ. ಆದರೆ ಇತ್ತೀಚೆಗೆ ಪುಸ್ತಕ ಇರಲಿ, ಪತ್ರಿಕೆಗಳನ್ನು ಓದುವುದೂ ವಿರಳವಾಗುತ್ತಿದೆ ಎಂದು ಬೇಸರಿಸಿದರು.
ಪತ್ರಿಕೆಗಳನ್ನು ನಿತ್ಯ ಓದುವ ಮೂಲಕ ಕನ್ನಡಾಭಿಮಾನದೊಂದಿಗೆ ಸಾಮಾನ್ಯ ಜ್ಞಾನ, ಆಲೋಚನಾ ಕ್ರಮ ಬೆಳೆಯುತ್ತದೆ. ಇದಕ್ಕೆ ವಿಜಯವಾಣಿ ಕೈಗೊಂಡಿರುವ ಅಭಿಯಾನ ಮಾದರಿಯಾಗಿದೆ ಎಂದರು.
ಪದಬಂಧವನ್ನು ಹೆಚ್ಚು ಜನರು ಜೋಡಣೆ ಮಾಡುವ ಮೂಲಕ ಬುದ್ಧಿ ಚುರುಕುಗೊಳಿಸಿಕೊಳ್ಳುತ್ತಿದ್ದರು. ಅದರೆ ಈಗ ಮೊಬೈಲ್, ಟಿವಿಯಿಂದಾಗಿ ಪದಬಂಧ ಮಾಡುವುದೂ ಕಡಿಮೆ ಅಗಿದೆ. ಇನ್ನಾದರೂ ‘ಕೋಶ ಓದು, ದೇಶ ಸುತ್ತು’ ಎನ್ನುವ ನಾಣ್ಣುಡಿಗೆ ಬದ್ಧರಾಗಿ ಓದುಗ ಹವ್ಯಾಸ ಹೆಚ್ಚಿಸಿಕೊಳ್ಳಬೇಕು ಎಂದರು.
‘ವಿಜಯವಾಣಿ’ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ, ಜಾಹೀರಾತು ವಿಭಾಗದ ವ್ಯವಸ್ಥಾಪಕ ದೀಪಕ್ ಘಾಟ್ಕೆ ಇತರರು ಇದ್ದರು.
‘ಲಕ್ಕಿ ಡ್ರಾ’ ಅದೃಷ್ಟಶಾಲಿ ಮಹಿಳೆಯರು
ಡಿ.ಬಿ.ಪ್ರಿಯದರ್ಶಿನಿ (96325 05027), ಬಿ.ಎ.ಲೋಕೇಶ್ವರಿ (98452 32229), ಶಿವಪುತ್ರಮ್ಮ (91640 94799), ಕವಿತಾ (94801 51966), ಲಕ್ಷ್ಮೀ (89711 75817), ಎಂ.ಮೀರಾಬಾಯಿ (99727 28087), ಭಾಗ್ಯಲಕ್ಷ್ಮೀ (96636 15307), ಕೆ.ಪಿ.ಚಂದ್ರಿಕಾ (90360 08433), ಗೀತಾ ಸುಂದರಮೂರ್ತಿ (93801 56404), ಬಿ.ಆರ್.ವೀಣಾ (88617 11063), ಎನ್.ಜಿ.ಲತಾ (91644 34638), ಎಸ್.ಜ್ಯೋತಿ (94485 61147), ರೂಪಾ ಮಹೇಶ (99459 88043), ಎಂ.ಎನ್.ಯೋಗೇಶ್ವರಿ (81475 31623), ಸವಿತಾ ಪ್ರಸನ್ನ (9242882804), ಸುಜಯಾ ಸಿಂಹ (99728 24652), ವಿಜಯಲಕ್ಷ್ಮೀ (914826 0043), ಅನಿತಾ (99648 86934), ಪೂಜಾ ಶಿರಾಲಿ (93418 40026), ಪಿ.ಎಸ್.ಶಿಲ್ಪಶ್ರೀ (89514 39440).