ಜಿಲ್ಲೆ

ದೀರ್ಘ ಆಯುಷ್ಯದ ಗುಟ್ಟು ಯೋಗ

ಹಾವೇರಿ: ನಿತ್ಯ ಯೋಗಾಭ್ಯಾಸ ರೂಢಿಸಿಕೊಂಡರೆ ರೋಗ ಮುಕ್ತರಾಗಬಹುದು. ಮಾನಸಿಕ, ದೈಹಿಕವಾಗಿ ಸದೃಢರಾಗಬಹುದು. ಜತೆಗೆ ದೀರ್ಘಾಯುಷ್ಯರಾಗಬಹುದು. ಹಾಗಾಗಿ, ಮಕ್ಕಳು ಬಾಲ್ಯದಲ್ಲೇ ಯೋಗಾಭ್ಯಾಸ ರೂಢಿಸಿಕೊಂಡರೆ ಉತ್ತಮ ಎಂದು ಶಾಸಕ ರುದ್ರಪ್ಪ ಲಮಾಣಿ ಹೇಳಿದರು.

ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಾಚೀನ ಕಾಲದಿಂದಲೂ ಋಷಿಮುನಿಗಳು ಯೋಗಾಭ್ಯಾಸದಿಂದ ನೂರಾರು ವರ್ಷ ಬದುಕಿದ ಉದಾಹರಣೆಗಳಿವೆ. ಆಧುನಿಕ ಯುಗದಲ್ಲಿ ಮನುಷ್ಯನಿಗೆ ಯೋಗ ಅತ್ಯಗತ್ಯವಾಗಿದೆ ಎಂದರು.

ಯೋಗ ಶಿಕ್ಷಕಿ ಜ್ಯೋತಿ ಅವರು ವಿವಿಧ ಆಸನಗಳ ಬಗ್ಗೆ ತಿಳಿಸಿಕೊಟ್ಟರು. ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿ.ಪಂ.ಉಪ ಕಾರ್ಯದರ್ಶಿ ಎಸ್.ಜಿ.ಮುಳ್ಳಳ್ಳಿ, ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ಡಾ.ಜಿ.ಸಿ.ನಿಡಗುಂದಿ, ಜಗದೀಶ್ವರ, ಲತಾ ಬಿ.ಎಸ್., ಗಿರೀಶ ಸ್ವಾದಿ, ಡಾ.ಪ್ರಭಾಕರ ಕುಂದೂರ, ಮೌನೇಶ್ವರ ಬಡಿಗೇರ, ಸಂಜೀವಕುಮಾರ ನೀರಲಗಿ ಇತರರು ಉಪಸ್ಥಿತರಿದ್ದರು. ಶಿಕ್ಷಕ ನಾಗರಾಜ ನಡುವಿನಮಠ ಕಾರ್ಯಕ್ರಮ ನಿರೂಪಿಸಿದರು. ಡಾ.ರಾಜಶೇಖರ ವಂದಿಸಿದರು. ಶಾಸಕ ರುದ್ರಪ್ಪ ಲಮಾಣಿ ಅವರು ವಿದ್ಯಾರ್ಥಿಗಳೊಂದಿಗೆ ಯೋಗಾಭ್ಯಾಸ ಮಾಡಿದರು.

ಯೋಗ ಪ್ರದರ್ಶನ

ಯೋಗ ತರಬೇತುದಾರ ನವೀನ ಹೊಸಳ್ಳಿ ಹಾಗೂ ವಿಶೇಷ ಚೇತನ ಯೋಗಪಟು ಅನಸೂಯಾ ಚಲ್ಲಾಳ ಅವರಿಂದ ವಿಶೇಷ ಯೋಗ ನೃತ್ಯ ಪ್ರದರ್ಶನ ಜರುಗಿತು. ದೇಶಭಕ್ತಿ ಗೀತೆಗಳ ತಾಳಕ್ಕೆ ತಕ್ಕಂತೆ ಆಸನಗಳನ್ನು ಪ್ರಸ್ತುತಪಡಿಸಿದರು.