ರಬಕವಿ/ಬನಹಟ್ಟಿ: ಬನಹಟ್ಟಿಯ ಶ್ರೀ ಕಾಡಸಿದ್ಧೇಶ್ವರ ಜಾತ್ರೆ ನಿಮಿತ್ತ ಜಗಜಟ್ಟಿಗಳ ನಡುವೆ ಬುಧವಾರ ನಡೆದ ರಾಷ್ಟ್ರಮಟ್ಟದ ಜಂಗಿನಿಕಾಲಿ ಕುಸ್ತಿಗಳು ಅಪಾರ ಕುಸ್ತಿ ಪ್ರೇಮಿಗಳ ಮನಗೆದ್ದವು. ಕುಸ್ತಿ ವೀಕ್ಷಿಸಲು ವಿವಿಧೆಡೆಯಿಂದ ಜನಸಾಗರವೇ ಹರಿದು ಬಂದಿತ್ತು.
ಬನಹಟ್ಟಿಯ ರಾಜೇಂದ್ರ ಭದ್ರಣ್ಣವರ ಕುಸ್ತಿ ಮೈದಾನಕ್ಕೆ ಪೂಜೆ ಸಲ್ಲಿಸಿದರು. 100ಕ್ಕೂ ಹೆಚ್ಚು ಕುಸ್ತಿಪಟುಗಳು ವಿಭಿನ್ನ ರೀತಿಯಲ್ಲಿ ಟಾಂಗ್‌ಗಳನ್ನು ಹಾಕಿ ಕುಸ್ತಿಯಾಡಿ ನೆರೆದವರನ್ನು ರಂಜಿಸಿದರು. ಕುಸ್ತಿ ಆಡಿಸುವವರ ಗಮನಕ್ಕೆ ಬಾರದೆ ಅಚಾನಕ್ಕಾಗಿ ಏನಾದರೂ ತಪ್ಪುಗಳಾದರೆ ಸಾವಿರಾರು ಜನ ಕೇಕೆ ಹಾಕಿ ಕೆಲ ಕುಸ್ತಿಪಟುಗಳಿಗೆ ನ್ಯಾಯ ದೊರಕಿಸಿ ಕೊಡುವ ಕೆಲಸ ಮಾಡಿದರು.
ನೆರೆಯ ಮಹಾರಾಷ್ಟ್ರದ ಹಾಗೂ ಕರ್ನಾಟಕದ ಬಹುತೇಕ ನಗರಗಳಿಂದ ಇಲ್ಲಿನ ಕುಸ್ತಿಗಳನ್ನು ನೋಡಲು ವೀಕ್ಷಕರ ದಂಡವೇ ಆಗಮಿಸಿತ್ತು. ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಕುಸ್ತಿ ಪಟುಗಳು ಇಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು.
ಖ್ಯಾತ ಕುಸ್ತಿಪಟುಗಳಾದ ಮಹಾರಾಷ್ಟ್ರದ ಪುಣೆಯ ಮೌಲಿ, ದಿಲ್ಲಿಯ ಆಶೀಶ್ ಹೂಡಾ, ಕೊಲ್ಲಾಪುರ ಸಾಗರ ತಮಕಡೆ, ಪುಣೆಯ ನಾಗರಾಜ ಬಸಿಡೋಣಿ, ಕಾರ್ತಿಕ ಕಾಟೆ, ದೀಪಕ ದಿಲ್ಲಿ, ಬೆಳಗಾವಿಯ ಶಿವಯ್ಯ ಪೂಜಾರಿ, ಸಾಂಗಲಿಯ ವಿಶ್ವಜೀತ್ ರೂಪಣ್ಣವರ, ಹಣಮಂತ ಬನಹಟ್ಟಿ, ದತ್ತುಸಾಬ ಕೊಲ್ಹಾಪೂರ, ಸಾಗರ ಜಗದಾಳ, ಪರಶು ಹರಿಹರ, ಹುಚ್ಚಪ್ಪ ಬನಹಟ್ಟಿ, ಸಚಿನ್ ಕೊಲ್ಹಾಪೂರ, ಕಾಡು ಗೌಳಿ, ಮಹೇಶ ಬಿರ್ಜೆ, ಮಹೇಶ ಬನಹಟ್ಟಿ , ಸಾಗರ ಪಾಟೀಲ ಅವರು ಪಾಲ್ಗೊಂಡಿದ್ದರು.