oppo_0 
ಜಿಲ್ಲೆ

ಬೈಲಕುಪ್ಪೆಯಲ್ಲಿ ನಿಲ್ಲದ ನಾಯಿಗಳ ಹಾವಳಿ

ಬೈಲಕುಪ್ಪೆ: ಬೀದಿನಾಯಿಗಳ ಹಾವಳಿಗೆ ಬೈಲಕುಪ್ಪೆ ಗ್ರಾಮದ ಜನರು ಹೈರಾಣಾಗಿದ್ದಾರೆ.


ಬೀದಿ ನಾಯಿಗಳ ಕಡಿತಕ್ಕೆ ಹೆದರಿರುವ ಸಾರ್ವಜನಿಕರು ಭಯ ಭೀತಿಯಿಂದ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಬಿ ಎಂ.ರಸ್ತೆ, ಶ್ರೀಗಣಪತಿ ದೇವಸ್ಥಾನದ ಪಕ್ಕದಲ್ಲಿ ಖಾಸಗಿ ಕ್ಲಿನಿಕ್, ಪೋಸ್ಟ್ ಆಫೀಸ್, ಅಂಗಡಿ ಮುಂಗಟ್ಟು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಕ್ಕದಲ್ಲಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು ಸಂಚರಿಸುವಾಗ ಹಿಂದಿನಿಂದ ಸದ್ದಿಲ್ಲದೆ ಬರುವ ಬೀದಿನಾಯಿಗಳು ಕಚ್ಚಿ ಪರಾರಿಯಾಗುತ್ತವೆ.


ಯಾವುದೋ ಕೆಲಸದ ಮೇಲೆ ತೆರಳುತ್ತಿದ್ದವರು ನಾಯಿಗಳಿಂದ ಕಚ್ಚಿಸಿಕೊಂಡು ಚುಚ್ಚುಮದ್ದಿಗಾಗಿ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಯ ಮೊರೆ ಹೋಗಬೇಕಾಗಿದೆ.


ಸಂಬಂಧಪಟ್ಟ ಅಧಿಕಾರಿಗಳು ನಾಯಿಗಳನ್ನು ಹಿಡಿದು ಬೇರೆಡೆಗೆ ಸಾಗಿಸುವಂತೆ ಸಂಬಂಧಿಸಿದವರಿಗೆ ಹಲವಾರು ಬಾರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ವಿಜಯವಾಣಿಗೆ ತಿಳಿಸಿದರು.


ಒಂದನೇ ಕ್ಯಾಂಪ್ ರಸ್ತೆಯಲ್ಲೂ ಬೀದಿನಾಯಿ ಸಾರ್ವಜನಿಕರು ಹಾಗೂ ಬೈಕ್ ಸವಾರರನ್ನು ಹಲವಾರು ಬಾರಿ ಕಚ್ಚಿ ಗಾಯಗೊಳಿಸಿರುವ ನಿದರ್ಶನಗಳಿವೆ. ಕೆಲ ಬೈಕ್ ಸವಾರರು ನಾಯಿಗೆ ಹೆದರಿ ಬಿದ್ದು ಗಾಯಗೊಂಡಿರುವುದೂ ಉಂಟು.
ಇದೇ ಮಾರ್ಗದಲ್ಲಿ ಪ್ರೌಢಶಾಲೆ, ಎಸ್‌ಬಿಎಂ ಬ್ಯಾಂಕ್ ಇದ್ದು, ಶಾಲಾ ಮಕ್ಕಳು, ಸಾರ್ವಜನಿಕರು ಪ್ರತಿದಿನ ಭಯದಿಂದಲೇ ಓಡಬೇಕಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಬೀದಿನಾಯಿಯನ್ನು ಹಿಡಿದು ಬೇರೆಡೆಗೆ ಸಾಗಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬೀದಿನಾಯಿಗಳು ನಮ್ಮ ಕಣ್ಮುಂದೆಯೇ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳಿಗೆ ಕಚ್ಚಿವೆ. ಸಂಬಂಧಪಟ್ಟ ಅಧಿಕಾರಿಗಳು ನಾಯಿಗಳನ್ನು ಹಿಡಿದು ಬೇರೆಡೆಗೆ ಸಾಗಿಸಿ ಸಾರ್ವಜನಿಕರು, ವಿದ್ಯಾರ್ಥಿಗಳು ನಿರ್ಭೀತಿಯಿಂದ ಸಂಚರಿಸುವಂತೆ ಅನುಕೂಲ ಮಾಡಿಕೊಡಬೇಕಿದೆ.
ಹೇಮೇಶ್, ಸದಸ್ಯ, ಪಿರಿಯಾಪಟ್ಟಣ ತಾಲೂಕು ರೋಟರಿ ಮಿಟ್ ಟೌನ್, ಬೈಲಕುಪ್ಪೆ

ನಾಯಿಗಳ ಹಾವಳಿ ಹೆಚ್ಚಿರುವುದು ಗಮನಕ್ಕೆ ಬಂದಿದ್ದು,
ಕೂಡಲೇ ಪರಿಶೀಲಿಸಿ, ಹಿಡಿದು ಬೇರೆಡೆ ಸಾಗಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು.
ಬೋರೇಗೌಡ, ಪಿಡಿಒ, ಬೈಲಕುಪ್ಪೆ