ಜಿಲ್ಲೆ

ಸರ್ವೋದಯ ಮಂತ್ರವೇ ಅತಂತ್ರವಾಗಿದೆ : ಹಿರಿಯ ಸಾಹಿತಿ ಪ್ರೊ.ಸಿ.ಪಿ.ಕೃಷ್ಣಕುಮಾರ್

ಮೈಸೂರು: ಎಲ್ಲೆಡೆ ಸ್ವಾರ್ಥ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಕುವೆಂಪು ಅವರ ಸರ್ವೋದಯ ಮಂತ್ರವೇ ಅತಂತ್ರವಾಗಿದೆ ಎಂದು ಹಿರಿಯ ಸಾಹಿತಿ ಪ್ರೊ.ಸಿ.ಪಿ.ಕೃಷ್ಣಕುಮಾರ್ ವಿಷಾದ ವ್ಯಕ್ತಪಡಿಸಿದರು.

ಕ್ರಿಯಾ ಅಭಿವ್ಯಕ್ತಿ ಸಂಸ್ಥೆಯಿಂದ ನಗರದ ಜೆಎಲ್‌ಬಿ ರಸ್ತೆಯ ಇಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ನೀ.ಗೂ.ರಮೇಶ್ ಅವರ ‘ಗಾಂಧೀಮರ’ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು. ಗಾಂಧೀಜಿ ಹುತಾತ್ಮರಾದ ಸರ್ವೋದಯ ದಿನದ ಸಂದರ್ಭದಲ್ಲೇ ಈ ಕವನ ಸಂಕಲನ ಬಿಡುಗಡೆಯಾಗುತ್ತಿದೆ. ಆದರೆ ಇಂದಿನ ಸಮಾಜ ಸರ್ವೋದಯ ಪರಿಕಲ್ಪನೆಯ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸ್ವಾರ್ಥ ಮಿತಿ ಮೀರಿದೆ:

ಸಮಾಜದಲ್ಲಿ ವಿಶಾಲ ಮನೋಭಾವ ದೂರವಾಗಿದೆ. ಸ್ವಾರ್ಥ ಮಿತಿ ಮೀರಿದೆ. ಅಧಿಕಾರ, ಅಹಂಕಾರಗಳ ಅಮಲು ಎಲ್ಲೆಲ್ಲೂ ಗೋಚರವಾಗುತ್ತಿದೆ. ಅಹಂ ಅನ್ನು ದೂರ ಮಾಡಿ, ಗಾಂಧೀಜಿಯ ಸರಳ ಜೀವನ, ಉನ್ನತ ಚಿಂತನೆಯನ್ನು ಅಳವಡಿಸಿಕೊಳ್ಳಬೇಕಿದೆ ಎಂದರು. ಈಗ ಎಲ್ಲರೂ ಸರದಾರರಾಗಲು ಬಯಸುತ್ತಿದ್ದಾರೆ. ಅಹಿಂಸೆಗೆ ವಾರಸುದಾರರಾಗಲು ಯಾರಿಗೂ ಬಯಕೆ ಇಲ್ಲವಾಗಿದೆ. ಇದು ಇಂದಿನ ದುರಂತ ಎಂದು ಪ್ರೊ.ಸಿ.ಪಿ.ಕೃಷ್ಣಕುಮಾರ್ ಹೇಳಿದರು. ನೀ.ಗೂ.ರಮೇಶ್ ರೂಪಕ ಮಾರ್ಗದಲ್ಲಿ ಸಾಗಿ ಕವಿತೆಗಳನ್ನು ಕಟ್ಟಿ ಕೊಟ್ಟಿದ್ದಾರೆ. ಇದರಲ್ಲಿ ಒಳತುಡಿತ ಕಂಡು ಬರುತ್ತದೆ. ಹೀಗೆ ಗಾಂಧಿ ತತ್ವದ ಬೀಜಗಳು ಎಲ್ಲೆಲ್ಲೂ ಹರಿದಾಡಲಿ ಎಂದರು.

ವಿಶ್ರಾಂತ ಪ್ರಾಧ್ಯಾಪಕಿ ಪ್ರೊ.ಎಚ್.ಜೆ.ಸರಸ್ವತಿ, ಲೇಖಕ ಪ್ರಸನ್ನಕುಮಾರ್, ಲೇಖಕ ಡಾ.ನೀ.ಗೂ.ರಮೇಶ್, ಸ್ಪಂದನ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಟಿ.ಸತೀಶ್ ಜವರೇಗೌಡ, ಸುಪ್ರಿಯಾ ಶಿವಣ್ಣ ಇತರರು ಇದ್ದರು.