ರಾಯಚೂರು: ಪ್ರಯಾಣಿಕರ ಸುರಕ್ಷತೆಯ ಜವಾಬ್ದಾರಿ ಚಾಲಕರ ಮೇಲಿದ್ದು, ಚಾಲಕರು ಪ್ರಯಾಣಿಕರ ಹಿತದೃಷ್ಟಿಯಲ್ಲಿಟ್ಟುಕೊಂಡು ವಾಹನ ಚಾಲನೆ ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಕಾರಿ ಎಂ.ಎಸ್.ಚಂದ್ರಶೇಖರ ಹೇಳಿದರು.
ಸ್ಥಳೀಯ ಕೇಂದ್ರ ಬಸ್ ನಿಲ್ದಾಣದಲ್ಲಿ ಸಂಸ್ಥೆಯಿಂದ ಬುಧವಾರ ಹಮ್ಮಿಕೊಂಡಿದ್ದ ಚಾಲಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಚಾಲಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸುರಕ್ಷತ ಚಾಲನೆ ಮಾಡುವ ಸಿಬ್ಬಂದಿಗೆ ರಾಜ್ಯ ಮಟ್ಟದಲ್ಲಿ ಬಂಗಾರ, ಬೆಳ್ಳಿ ಪದಕ ನೀಡಿ ಗೌರವಿಸಲಾಗುತ್ತಿದೆ ಎಂದರು.
ಪ್ರಯಾಣಿಕರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುರಕ್ಷಿತವಾಗಿ ಮುಟ್ಟಿಸುವುದರ ಜತೆಗೆ ಪ್ರಯಾಣಿಕರೊಂದಿಗೆ ಸೌಹಾರ್ದತೆಯಿಂದ ಮಾತನಾಡುವ ಚಾಲಕರಿಗೆ ಪ್ರೋತ್ಸಾಹಿಸಲಾಗುತ್ತಿದೆ. ಚಾಲಕರು ಕೂಡಾ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ತಾಂತ್ರಿಕ ಅಕಾರಿ ಹಸನ್ ಅಲಿ, ವಿಭಾಗೀಯ ಸಂಚಾರ ಅಕಾರಿ ಕೆ.ಎಲ್.ಚಂದ್ರಶೇಖರ, ಕಾರ್ಮಿಕ ಕಲ್ಯಾಣಾಕಾರಿ ರವಿಕುಮಾರ, ಲೆಕ್ಕಪತ್ರ ಅಕಾರಿ ಮಹಾಂತೇಶ, ನಿರ್ವಾಹಕ ಅಣ್ಣಪ್ಪ ಹಾಗೂ ಚಾಲಕರು ಉಪಸ್ಥಿತರಿದ್ದರು.