ಸವದತ್ತಿ: ಸೈನಿಕನಾಗಿ ದೇಶ ಸೇವೆ ಮಾಡುವ ಅವಕಾಶ ಸಿಕ್ಕಿಲ್ಲ. ಆದರೆ ಸಮಾಜ ಸೇವೆಗೆ ಅವಕಾಶ ಸಿಕ್ಕಿದ್ದು ಅದನ್ನು ಪ್ರಾಮಾಣಿಕವಾಗಿ ಸದ್ಬಳಕೆ ಮಾಡಿಕೊಳ್ಳುತ್ತೇನೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಇಲ್ಲಿನ ನಿಕ್ಕಂ ಕಲ್ಯಾಣ ಮಂಟಪದಲ್ಲಿ ಬುಧವಾರ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ 24ನೇ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಇದೊಂದು ಸುವರ್ಣಾಕ್ಷರದಲ್ಲಿ ಬರೆದ ದಿನ. ಕಾರ್ಗಿಲ್ ಯುದ್ಧ ಪ್ರತಿಯೊಬ್ಬ ಪ್ರಜೆಯ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಯುದ್ಧದಲ್ಲಿ ವೀರಮರಣವನ್ನಪ್ಪಿದ ಯೋಧರ ತ್ಯಾಗ, ಬಲಿದಾನವನ್ನು ಸ್ಮರಿಸಬೇಕು. ಯೋಧರಲ್ಲಿ ದೇವರನ್ನು ಕಾಣಬೇಕು ಎಂದರು.
ಬಿಜೆಪಿ ಮುಖಂಡ ವಿರೂಪಾಕ್ಷ ಮಾಮನಿ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಹಾಗೂ ವೀರ ಮರಣ ಹೊಂದಿದ ಸೈನಿಕರಿಗೆ ಗೌರವ ಸಲ್ಲಿಸುವ ಈ ದಿನ ಸದಾ ಸ್ಮರಣೀಯ. ಗಡಿಯಲ್ಲಿರುವ ಸೈನಿಕರ ರಕ್ಷಾ ಕವಚದಿಂದ ನಾವೆಲ್ಲ ಸುರಕ್ಷಿತವಾಗಿದ್ದೇವೆ ಎಂದರು.
ವೀರ ಮರಣ ಹೊಂದಿದ ಅಸುಂಡಿ ಗ್ರಾಮದ ಮಡಿವಾಳಪ್ಪ ಹಡಪದ ಹಾಗೂ ಸಿಂಗಾರಗೊಪ್ಪ ಗ್ರಾಮದ ಈರಪ್ಪ ಸವದತ್ತಿ ಅವರ ಸ್ಮಾರಕದಿಂದ ಪಟ್ಟಣದ ಎಸ್.ಎಲ್.ಎ.ಒ ಕ್ರಾಸ್, ಲಿಂಗರಾಜ ಸರ್ಕಲ್, ಕಟಕೋಳ ಬ್ಯಾಂಕ್, ಆನಿ ಅಗಸಿ, ರಾಯಣ್ಣ ಸರ್ಕಲ್, ಬಸವೇಶ್ವರ ಸರ್ಕಲ್, ಶಿವಾಜಿ ಸರ್ಕಲ್ ಮಾರ್ಗವಾಗಿ ಜಿ.ಜಿ.ಚೋಪ್ರಾ ಹೈಸ್ಕೂಲ್ ವರೆಗೆ ಬೈಕ್ ರ‌್ಯಾಲಿ ಮಾಡಲಾಯಿತು.
ಕಾರ್ಗಿಲ್ ಯುದ್ಧದಲ್ಲಿ ವೀರ ಮರಣ ಹೊಂದಿದ ಅಸುಂಡಿ ಗ್ರಾಮದ ಮಡಿವಾಳಪ್ಪ ಹಡಪದ ಹಾಗೂ ಸಿಂಗಾರಗೊಪ್ಪ ಗ್ರಾಮದ ಈರಪ್ಪ ಸವದತ್ತಿ ಅವರ ಕುಟುಂಬವನ್ನು ಸತ್ಕರಿಸಲಾಯಿತು. ಸಿಪಿಐ ಕರುಣೇಶಗೌಡ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮಹಾದೇವ ರಂಕಲಕೊಪ್ಪ, ಬಿ.ವಿ.ಮಲಗೌಡರ, ವರ್ಷಾ ಗಾಂವಕರ, ಶ್ರೀಧರ ಆಸಂಗಿಹಾಳ ಇತರರಿದ್ದರು.