ಜಿಲ್ಲೆ

ವಿದ್ಯಾರ್ಥಿಗಳ ವಿಚಾರಣೆ ವೇಳೆ ನಿಯಮ ಉಲ್ಲಂಘನೆಯಾಗಿಲ್ಲ; ಸರ್ಕಾರದಿಂದ ಹೈಕೋರ್ಟ್​ಗೆ ಮಾಹಿತಿ

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಾಟಕ ಪ್ರದರ್ಶಿಸಿದ್ದಕ್ಕೆ ಬೀದರ್​ನ ಶಾಹೀನ್ ಶಿಕ್ಷಣ ಸಂಸ್ಥೆಯ ವಿರುದ್ಧ ದೇಶದ್ರೋಹ ಆರೋಪದಡಿ ದಾಖಲಾಗಿರುವ ಪ್ರಕರಣದ ಸಂಬಂಧ ಅಪ್ರಾಪ್ತ ವಿದ್ಯಾರ್ಥಿಗಳ ವಿಚಾರಣೆ ನಡೆಸುವಾಗ ಪೊಲೀಸರಿಂದ ನಿಯಮ ಉಲ್ಲಂಘನೆಯಾಗಿಲ್ಲ ಎಂದು ಹೈಕೋರ್ಟ್​ಗೆ ಸರ್ಕಾರ ತಿಳಿಸಿದೆ.

ಸೌತ್ ಇಂಡಿಯಾ ಫಾರ್ ಹ್ಯೂಮನ್ ರೈಟ್ಸ್ ಎಜುಕೇಷನ್ ಆಂಡ್ ಮಾನಿಟರಿಂಗ್ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಿಜೆ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು.

ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ವಾದ ಮಂಡಿಸಿ, ಪ್ರಕರಣ ಸಂಬಂಧ ಪೊಲೀಸರು ಮಕ್ಕಳನ್ನು ವಿಚಾರಣೆಗೊಳಪಡಿಸಿದಾಗ ಕಾನೂನು ಮತ್ತು ನಿಯಮಗಳ ಉಲ್ಲಂಘನೆ ಆಗಿಲ್ಲ. ಮಾಧ್ಯಮಗಳ ವರದಿ ಆಧರಿಸಿ

ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ. ಮಕ್ಕಳ ಹಕ್ಕುಗಳ ಆಯೋಗಕ್ಕೆ ನೀಡಿರುವ ದೂರಿನಲ್ಲಿ ಪೊಲಿಸರ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದರು.

ತನಿಖಾಧಿಕಾರಿಗಳು ಸಿವಿಲ್ ಸಮವಸ್ತ್ರದಲ್ಲಿ ಶಾಲೆಗೆ ಭೇಟಿ ನೀಡಿ, ಶಾಲಾ ಮಕ್ಕಳನ್ನು ಆಪ್ತ ಸಮಾಲೋಚನೆಗೆ (ಕೌನ್ಸೆಲಿಂಗ್) ಒಳಪಡಿಸಿದ್ದಾರೆ ಎಂದರು. ಸರ್ಕಾರದ ಆಕ್ಷೇಪಣೆಗೆ ಪ್ರತಿ ಆಕ್ಷೇಪಣೆ ಸಲ್ಲಿಸಲು ಅರ್ಜಿದಾರರಿಗೆ ಕಾಲಾವಕಾಶ ನೀಡಿದ ಪೀಠ, ವಿಚಾರಣೆಯನ್ನು ಮಾ.9ಕ್ಕೆ ಮುಂದೂಡಿತು.

ಸರ್ಕಾರದ ಆಕ್ಷೇಪಣೆಯಲ್ಲೇನಿದೆ?

ಪ್ರಕರಣದ ಸಂಬಂಧ ಆಪ್ತ ಸಮಾಲೋಚನೆ ಅಥವಾ ತಪಾಸಣೆಗೊಳಪಡಿಸಲು ಮಕ್ಕಳನ್ನು ಹಾಜರುಪಡಿಸುವಂತೆ ಶಾಲಾ ಆಡಳಿತ ಮಂಡಳಿಗೆ ತನಿಖಾಧಿಕಾರಿಗಳು ಮನವಿ ಮಾಡಿಕೊಂಡರು. ಇದಕ್ಕೆ ನಿರಾಕರಿಸಿದ ಆಡಳಿತ ಮಂಡಳಿ, ಮಕ್ಕಳನ್ನು ಕಳುಹಿಸಲಾಗುವುದಿಲ್ಲ. ಬದಲಿಗೆ ಶಾಲೆಯಲ್ಲಿಯೇ ವಿಚಾರಣೆ ನಡೆಸುವಂತೆ ಕೋರಿತು ಎಂದು ಸರ್ಕಾರ ತನ್ನ ಆಕ್ಷೇಪಣೆಯಲ್ಲಿ ಹೇಳಿದೆ. ಜ.28ರಂದು ತನಿಖಾಧಿಕಾರಿಗಳು ಶಾಲೆಗೆ ತೆರಳಿ ಮಕ್ಕಳ ರಕ್ಷಣಾ ಅಧಿಕಾರಿ ಗೌರಿಶಂಕರ್, ವಿಶೇಷ ಮಕ್ಕಳ ಪೊಲೀಸ್ ಘಟಕದ (ಎಸ್​ಜೆಪಿಯು) ಸದಸ್ಯೆ ಜಗದೇವಿ, ಶಾಲಾ ಸಿಬ್ಬಂದಿ, ಮಗುವಿನ ಪಾಲಕರ ಸಮ್ಮುಖದಲ್ಲಿ ವಿಚಾರಣೆ ನಡೆಸಿದರು. ತನಿಖಾಧಿಕಾರಿಗಳು ಸಿವಿಲ್ ಸಮವಸ್ತ್ರದಲ್ಲಿ ಇದ್ದರು, ಇಬ್ಬರು ಪೊಲೀಸರು ಸಮಸ್ತ್ರದಲ್ಲಿದ್ದರು. ಇದನ್ನು ಗಮನಿಸಿದ ಮಕ್ಕಳ ರಕ್ಷಣಾ ಅಧಿಕಾರಿ, ಸಿವಿಲ್ ಸಮವಸ್ತ್ರ ಧರಿಸುವಂತೆ ಸೂಚಿಸಿದರು. ಇಡೀ ಪ್ರಕ್ರಿಯೆಯಲ್ಲಿ ಕಾನೂನು-ನಿಯಮಗಳ ಉಲ್ಲಂಘನೆ ಎಲ್ಲಿಯೂ ಆಗಿಲ್ಲ ಎಂದು ಸರ್ಕಾರ ತಿಳಿಸಿದೆ.

ಕೌನ್ಸೆಲಿಂಗ್ ಪೊಲೀಸರ ಕೆಲಸವೇ?

ವಿದ್ಯಾರ್ಥಿಗಳ ಆಪ್ತಸಮಾಲೋಚನೆ ನಡೆಸಲಾಗಿದೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಪೀಠ, ಕೌನ್ಸೆಲಿಂಗ್ ಮಾಡುವುದು ಪೊಲೀಸರ ಕೆಲಸವೇ ಮತ್ತು ಅವರಿಗೆ ಅದರ ತರಬೇತಿ ನೀಡಲಾಗಿದೆಯೇ ಎಂದು ಪ್ರಶ್ನಿಸಿತು. ಅದಕ್ಕೆ ಎಜಿ, ಬಾಲನ್ಯಾಯ ಕಾಯ್ದೆಯಡಿ ‘ಕೌನ್ಸೆಲಿಂಗ್’ ಪದ ಬಳಸಲಾಗಿದೆ. ಹಾಗಾಗಿ, ಪೊಲೀಸರ ಆಕ್ಷೇಪಣಾ ಪತ್ರದಲ್ಲಿ ಅದನ್ನು ಹೇಳಲಾಗಿದೆ ಎಂದು ಸ್ಪಷ್ಟನೆ ನೀಡಿದರು.