ಸಿದ್ದಾಪುರ: ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಲ್ಲಾಳ ಗ್ರಾಮಕ್ಕೆ ತನ್ನದೇ ಆದ ಇತಿಹಾಸವಿದ್ದು, ರಾಜರ ಆಳ್ವಿಕೆಯಿಂದಲೂ ಈ ಪುಟ್ಟ ಗ್ರಾಮ ಹೆಸರುವಾಸಿಯಾಗಿದೆ.
ಜಿಲ್ಲೆಯ ಗಡಿಭಾಗದಲ್ಲಿರುವ ಈ ಗ್ರಾಮದ ಸುತ್ತಲೂ ಸಮೃದ್ಧವಾದ ಹಸಿರು ಬೆಟ್ಟಗಳಿದ್ದು, ಪ್ರಶಾಂತ ವಾತಾವರಣವಿದೆ. ಮೈಸೂರಿನಿಂದ ಪಿರಿಯಾಪಟ್ಟಣ ಮಾರ್ಗವಾಗಿ ಅರಣ್ಯ ಪ್ರದೇಶದ ಮೂಲಕ ತೆರಳಿದರೆ ಮೊದಲು ಸಿಗುವುದು ಕಲ್ಲಾಳ ಗ್ರಾಮ. ಹಾಗಾಗಿ ಇದು ಪ್ರಸಿದ್ಧಿಯಾಗಿದೆ.
ಇತಿಹಾಸ: ರಸ್ತೆ ಮಾರ್ಗವಾಗಿ ಕಚ್ಚಾ ಪದಾರ್ಥಗಳನ್ನು ಸಿದ್ದಾಪುರಕ್ಕೆ ಕುದುರೆ ಸಹಾಯದಿಂದ ಹಿಂದಿನ ಕಾಲದಲ್ಲಿ ಸಾಗಣೆ ಮಾಡಲಾಗುತ್ತಿತ್ತು. ಅಂದಾಜು 600 ವರ್ಷಗಳ ಹಿಂದೆ ಪವಾಡ ಪುರುಷ ಲಿಂಗರಾಜರು ಕೂಡ ಈ ಗ್ರಾಮದ ಮಾರ್ಗವಾಗಿ ಕೊಡಗು ಪ್ರವೇಶಿಸುತ್ತಿದ್ದರು ಎನ್ನುವುದು ಈಗ ಇತಿಹಾಸ. ಅಲ್ಲದೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಸವೇಶ್ವರ ದೇವಾಲಯ ನಿರ್ಮಾಣವಾಗಿರುವುದು ಇದಕ್ಕೆ ಸಾಕ್ಷಿ. ಕೊಡಗಿನ ರಾಜ ದೊಡ್ಡವೀರರಾಜೇಂದ್ರ ಆಳ್ವಿಕೆಯಲ್ಲಿ ಗಡಿ ಪ್ರದೇಶವಾಗಿ ಈ ಗ್ರಾಮವನ್ನು ಗುರುತಿಸಲಾಯಿತು. ಕಲ್ಲುಗಳಲ್ಲಿ ವಿ ಎಂದು ನಾಮಕರಣ ಮಾಡಿದ ಕೆತ್ತನೆ ಕಲ್ಲುಗಳು ಇಂದಿಗೂ ಅರಣ್ಯ ಪ್ರದೇಶದ ವಿವಿಧ ಕಡೆಗಳಲ್ಲಿದ್ದು, ಬ್ರಿಟಿಷರು ಹಾಗೂ ಟಿಪ್ಪು ಸುಲ್ತಾನ್ ಕೂಡ ಈ ಗ್ರಾಮದ ಮುಖಾಂತರ ಕೊಡಗಿಗೆ ಪ್ರವೇಶಿಸಿದ್ದಾರೆ ಎಂದು ಹೇಳಲಾಗುತ್ತದೆ. ಮೈಲಾಪುರ, ಮಾಲ್ದಾರೆ ಗ್ರಾಮದಲ್ಲಿ ಗೌರಿ, ಗಣೇಶ ಹಬ್ಬದ ಪ್ರಯುಕ್ತ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು ಕಲ್ಲಾಳ ಗ್ರಾಮದ ಅಚ್ಚುತ ಕೆರೆಯಲ್ಲಿ ವಿಸರ್ಜನೆ ಮಾಡುತ್ತಿದ್ದುದರಿಂದ ಈ ಕೆರೆ ಕೂಡ ಪ್ರಸಿದ್ಧಿ ಪಡೆದಿದೆ.
ಇನ್ನು ಪ್ರವಾಸಿಗರನ್ನು ಆಕರ್ಷಿಸುತ್ತಿರುವ ದುಬಾರೆ ಆನೆ ಶಿಬಿರಕ್ಕೆ ಈ ಗ್ರಾಮದ ಮುಖಾಂತರ ವಾಹನದಲ್ಲಿ ತೆರಳಲು ಇರುವ ಇರುವ ಏಕೈಕ ದಾರಿ ಇದು. ಮೈಸೂರು ದಸರಾ ಉತ್ಸವ, ಕಾರ್ಯಾಚರಣೆ ಮತ್ತು ಸೆರೆ ಹಿಡಿದ ಆನೆಗಳನ್ನು ಕೊಂಡೊಯ್ಯಲು ಈ ಗ್ರಾಮದ ಮುಖಾಂತರ ತೆರಳಬೇಕಾಗಿದೆ. 1995ರಲ್ಲಿ ಕಲ್ಲಾಳ ಗ್ರಾಮದಲ್ಲಿ ಕೆಲವು ಕಾಡಾನೆಯನ್ನು ಹಿಡಿದು ಪಳಗಿಸುತ್ತಿದ್ದರು. ತದನಂತರ ನೀರಿನ ಅಭಾವ ಉಂಟಾಗಿ ಅರಣ್ಯ ಇಲಾಖೆ ಆನೆಗಳನ್ನು ದುಬಾರೆ ಆನೆ ಶಿಬಿರಕ್ಕೆ ಸ್ಥಳಾಂತರ ಮಾಡಲಾಯಿತು.
1991ರಲ್ಲಿ ಅಂಬರೀಷ್, ಪೂನಂ ದಾಸ್ ಗುಪ್ತಾ, ದೇವರಾಜ್ ಮತ್ತು ದೊಡ್ಡಣ್ಣ ನಟನೆಯ ‘ಅರಣ್ಯದಲ್ಲಿ ಅಭಿಮನ್ಯು’ ಚಿತ್ರದ ಚಿತ್ರೀಕರಣ ಕಲ್ಲಾಳ ಗ್ರಾಮದಲ್ಲಾಗಿದೆ. ಅಂದಿನ ಫಾರೆಸ್ಟ್ ಚೆಕ್‌ಪೋಸ್ಟ್ ಹಾಗೂ ಅರಣ್ಯ ಪ್ರದೇಶದ ವಿವಿಧ ಭಾಗಗಳಲ್ಲಿ 15 ದಿನಕ್ಕೂ ಹೆಚ್ಚು ದಿನ ಚಿತ್ರೀಕರಿಸಲಾಗಿದೆ. ಈಗಲೂ ಕೂಡ ಗ್ರಾಮದ ಗಡಿಯಲ್ಲಿ ಪೊಲೀಸ್ ಹಾಗೂ ಅರಣ್ಯ ಚೆಕ್‌ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಕಲ್ಲಾಳ ಗ್ರಾಮವು ಕುಶಾಲನಗರ ದುಬಾರೆ ಮೀಸಲು ರಕ್ಷಿತಾ ಅರಣ್ಯದ ಒಂದು ಭಾಗವಾಗಿದ್ದು, ಇನ್ನೊಂದು ಭಾಗ ತಿತಿಮತಿ ದೇವಮಚ್ಚಿ ಅರಣ್ಯ. ಉಪಗ್ರಾಮಗಳಾಗಿ ಹಣ್ಣಿನ ತೋಟ, ಗೇಟ್ ಹಾಡಿ, ಚೋಟ್ಟಪಾಳಿ, ದೊಡ್ಡೋಡ್ಲು ಎಂಬ ಗ್ರಾಮಗಳಿದ್ದು, ಇಲ್ಲಿ ಗಿರಿಜನರು, ಜೇನುಕುರುಬ, ಸೋಲಿಗರು, ಸೇರಿದಂತೆ ವಿವಿಧ ಪರಿಶಿಷ್ಟ ಜನಾಂಗಕ್ಕೆ ಸೇರಿದ ಮೂಲನಿವಾಸಿಗಳು ವಾಸಿಸುತ್ತಿದ್ದಾರೆ. ಜತೆಗೆ ಮಲಯಾಳಿ ಕುಟುಂಬಗಳು ಕೂಡ ಹೆಚ್ಚಾಗಿ ಇಲ್ಲಿ ವಾಸ ಮಾಡುತ್ತಿವೆ. ಕಾಫಿ, ಕರಿಮೆಣಸು, ಭತ್ತ, ಅಡಕೆ ಇಲ್ಲಿನ ಪ್ರಮುಖ ಬೆಳೆಗಳು. ಗ್ರಾಮದಲ್ಲಿ ಹೆಚ್ಚಿನ ಜನರು ಕೃಷಿ ಹಾಗೂ ಕೂಲಿಯನ್ನು ಅವಲಂಬಿಸಿದ್ದಾರೆ.
ಈ ಗ್ರಾಮ ಒಟ್ಟು 10,372 ಹೆಕ್ಟೇರ್ ಭೂಪ್ರದೇಶದಿಂದ ಕೂಡಿದ್ದು, 4,398 ಹೆಕ್ಟೇರ್ ಪ್ರದೇಶ ಅರಣ್ಯದಿಂದ ಕೂಡಿದೆ. ಜಿಲ್ಲಾ ಕೇಂದ್ರದಿಂದ 45 ಕಿ. ಮೀ. ಹಾಗೂ ಸಿದ್ದಾಪುರ ಪಟ್ಟಣದಿಂದ 12 ಕಿಲೋ ಮೀಟರ್ ದೂರದಲ್ಲಿದೆ. ಲಿಂಗಪುರ ಗಡಿ ಭಾಗದ ದುಬಾರೆ ಅರಣ್ಯದ ಒಳಭಾಗದ ಬೆಟ್ಟದ ತುದಿಯಲ್ಲಿ ಪುರಾತನ ಗದ್ದಿಗೆ ಸಿದ್ದೇಶ್ವರ ದೇಗುಲವಿದ್ದು, ದೇವರ ದರ್ಶನಕ್ಕೆ ಬರುವವರು ಅರಣ್ಯದೊಳಗೆ ಒಂದೂವರೆ ಕಿಲೋ ಮೀಟರ್ ನಡೆದು ಸನ್ನಿಧಿ ತಲುಪಬೇಕು. ಇಲ್ಲಿ ಗದ್ದಿಗೆ ಸಿದ್ದೇಶ್ವರ, ಬಸವೇಶ್ವರ, ಪಾರ್ವತಿ, ಗಣಪತಿ, ವೀರಭದ್ರೇಶ್ವರ, ಲಕ್ಷ್ಮೀ ದೇವರ ಗುಡಿಗಳಿವೆ. ಸಿದ್ದೇಶ್ವರನ ಕೃಪೆಯಿಂದ ಬರಗಾಲವಿಲ್ಲ. ಬೇಡಿದರೆ ಮಳೆ ಸುರಿಸುವ ಕರುಣಾಮಯಿಯ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ.
ಪವಾಡ ಪುರುಷ ಲಿಂಗರಾಜರು ಈ ಮಾರ್ಗವಾಗಿ ಕೊಡಗಿಗೆ ಪ್ರವೇಶಿಸಿದ ಸಂದರ್ಭ ಗದ್ದಿಗೆ ಬೆಟ್ಟದ ತುದಿಯಲ್ಲಿ ಸಿದ್ದೇಶ್ವರನ ದೇಗುಲ ಸ್ಥಾಪಿಸಿದರು ಎಂಬುದು ಈಗ ಇತಿಹಾಸ. ಹಸಿರನ್ನೇ ಹೊದ್ದುಕೊಂಡಿರುವ ಗದ್ದಿಗೆ ಸಿದ್ದೇಶ್ವರ ಬೆಟ್ಟ ನಿಸರ್ಗ ತಾಣವಾಗಿದೆ. ಬೆಟ್ಟ ಹತ್ತುವಾಗ ಎಲ್ಲಿ ನೋಡಿದರೂ ಹಸಿರು ಕಾಣುತ್ತದೆ. ಕೊಡಗಿನ ಅರ್ಧ ಭೂ ಪ್ರದೇಶವನ್ನೇ ನಾವು ಇಲ್ಲಿಂದ ಕಾಣಬಹುದಾಗಿದ್ದು, ಭಕ್ತರು ದೇವರ ದರ್ಶನ ಮಾಡುವುದರೊಂದಿಗೆ ಪ್ರಕೃತಿಯ ಸೌಂದರ್ಯವನ್ನೂ ಸವಿಯಬಹುದಾಗಿದೆ. ಗ್ರಾಮದಲ್ಲಿ ಬಸವೇಶ್ವರಸ್ವಾಮಿ ದೇವಸ್ಥಾನವಿದ್ದರೆ, ಅರಣ್ಯದೊಳಗೆ ಮುನೇಶ್ವರ ದೇವಾಲಯ ಹಾಗೂ ನಾರಾಯಣ ಗುರು ಸ್ವಾಮಿ ಮಂದಿರ ಇದೆ.
ರಾಜರ ಆಳ್ವಿಕೆಯಲ್ಲಿ ಮೈಸೂರಿನಿಂದ ಕಲ್ಲಾಳ-ಮಾಲ್ದಾರೆ ಮಾರ್ಗವಾಗಿ ಸಿದ್ದಾಪುರಕ್ಕೆ ವ್ಯಾಪಾರಿಗಳು ಕಚ್ಚಾ ಪದಾರ್ಥ ಮತ್ತು ಸೈನ್ಯಕ್ಕೆ ಅಗತ್ಯವಿದ್ದ ಮಾಲುಗಳನ್ನು ಸಾಗಿಸುತ್ತಿದ್ದರು. ಕೊಡಗಿನ ರಾಜ ದೊಡ್ಡವೀರರಾಜೇಂದ್ರ ಆಳ್ವಿಕೆಯಲ್ಲಿ ಗಡಿ ಪ್ರದೇಶವಾಗಿ ಈ ಗ್ರಾಮವನ್ನು ಇಟ್ಟುಕೊಂಡಿದ್ದರು. ಇಂದಿಗೂ ಕೆಲವು ಕಲ್ಲುಗಳನ್ನು ಇಲ್ಲಿ ಕಾಣಬಹುದು.
ಸಿ.ಎಂ.ರಾಜನ್
ದುಬಾರೆ ಆನೆ ಶಿಬಿರಕ್ಕೆ ತೆರಳಲು ಅಂದಿನ ಕಾಲದಲ್ಲಿ ಬ್ರಿಟಿಷರು ನಿರ್ಮಾಣ ಮಾಡಿದ ರಸ್ತೆಯನ್ನು ಇಂದಿಗೂ ಇಲ್ಲಿ ಕಾಣಬಹುದು. ಅಲ್ಲದೆ ಗ್ರಾಮದ ಸುತ್ತ ಹಲವು ಪುರಾತನ ದೇವಸ್ಥಾನಗಳು ಇದೆ. ಇವುಗಳಿಗೆ ತನ್ನದೇ ಆದ ಪುರಾತನ ಇತಿಹಾಸವಿದೆ.
ಅನೀಶ್ ಕಲ್ಲಾಳ ಗ್ರಾಮಸ್ಥ