ಜಿಲ್ಲೆ

ಗ್ರಂಥಾಲಯಕ್ಕೆ ಆವರಿಸಿದೆ ಕತ್ತಲು ; ಮಳೆಗೆ ಕುಸಿಯಿತು ಊರ್ಡಿಗೆರೆಯ ಶಿಥಿಲಗೊಂಡಿದ್ದ ಕಟ್ಟಡದ ಛಾವಣಿ

ತುಮಕೂರು : ಹಳ್ಳಿ ಮಕ್ಕಳನ್ನು ಸಾಕ್ಷರರನ್ನಾಗಿಸುವ ಜತೆಗೆ ಓದುವ ಅಭಿರುಚಿ ಬೆಳೆಸುವ ಸರ್ಕಾರದ ಮಹತ್ವಾಕಾಂಕ್ಷಿಯ ‘ಓದುವ ಬೆಳಕು’ ಯೋಜನೆಯ ಗ್ರಂಥಾಲಯದಲ್ಲೀಗ ಕತ್ತಲು ಕವಿದಿದೆ.

1974ರಲ್ಲಿ ತಾಲೂಕಿನ ಊರ್ಡಿಗೆರೆ ಹೋಬಳಿ ಕೇಂದ್ರದಲ್ಲಿ ಜಿಲ್ಲಾ ಗ್ರಂಥಾಲಯ ಕೇಂದ್ರದ ಶಾಖೆ ಆರಂಭಿಸಿದ್ದು, 36 ವರ್ಷಗಳಿಂದ ಗ್ರಾಪಂ ಒಡೆತನದ ಕಟ್ಟಡದಲ್ಲಿ ಈ ಪುಟ್ಟ ಗ್ರಂಥಾಲಯ ನಡೆದುಕೊಂಡು ಬಂದಿದೆ. ಈ ಗ್ರಂಥಾಲಯ ಕಟ್ಟಡ ಶಿಥಿಲಗೊಂಡಿದ್ದು, ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಜಡಿಮಳೆಯ ಪರಿಣಾಮ ಗುರುವಾರ ರಾತ್ರಿ ಛಾವಣಿ ಕಿತ್ತುಬಿದ್ದಿದೆ. ಬೆಳಗಿನ ಹೊತ್ತು ಈ ಘಟನೆ ಸಂಭವಿಸಿದ್ದರೆ ಓದುಗರು ಹಾಗೂ ಗ್ರಂಥಾಲಯ ಮೇಲ್ವಿಚಾರಕರು ಪ್ರಾಣಾಪಾಯಕ್ಕೆ ಸಿಲುಕಿಬಿಡುತ್ತಿದ್ದರು.

ಶಾಸಕರ ಸ್ಪಂದನೆ: ಗ್ರಂಥಾಲಯದ ಛಾವಣಿ ಕುಸಿದಿರುವ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಗ್ರಂಥಾಲಯಕ್ಕೆ ತಾತ್ಕಾಲಿಕ ಸೂರಿನ ವ್ಯವಸ್ಥೆ ಮಾಡುವಂತೆ ಗ್ರಾಪಂ ಅಧಿಕಾರಿಗಳಿಗೆ ಆದೇಶ ಕೊಟ್ಟಿದ್ದು ಸದ್ಯಕ್ಕೆ ಗ್ರಂಥಾಲಯವನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.

ಗ್ರಾಪಂ ಉಸ್ತುವಾರಿ: ಜಿಲ್ಲಾ ಗ್ರಂಥಾಲಯ ಕೇಂದ್ರದಡಿ ನಡೆಯುತ್ತಿದ್ದ ಈ ಗ್ರಂಥಾಲಯವನ್ನು 2 ವರ್ಷಗಳ ಹಿಂದೆ ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಗೆ ವಹಿಸಲಾಗಿದೆ. ಹಾಗಾಗಿ, ಗ್ರಂಥಾಲಯದ ಸಂಪೂರ್ಣ ಜವಾಬ್ದಾರಿ ಈಗ ಗ್ರಾಪಂ ಉಸ್ತುವಾರಿಯದ್ದಾಗಿದೆ. ಆದರೆ, ಶಿಥಿಲಗೊಂಡಿರುವ ಕಟ್ಟಡದ ಛಾವಣಿ ಕುಸಿಯುವ ಭೀತಿ ಇದ್ದರೂ ಗ್ರಂಥಾಲಯವನ್ನು ಬೇರೆಡೆಗೆ ವರ್ಗಾವಣೆ ಮಾಡುವ ಪ್ರಯತ್ನವನ್ನು ಗ್ರಾಪಂ ಅಧಿಕಾರಿಗಳು ಮಾಡದಿರುವುದು ನಿಜಕ್ಕೂ ಶೋಚನೀಯ.

ಸೋರುತ್ತಿರುವ ಗ್ರಂಥಾಲಯ: 36 ವರ್ಷಗಳ ಹಳೆಯ ಗ್ರಂಥಾಲಯ ಬಹುತೇಕ ಶಿಥಿಲಾವಸ್ಥೆ ತಲುಪಿದ್ದು, ಕಳೆದ 3-4 ವರ್ಷಗಳಿಂದ ಮಳೆಗಾಲದಲ್ಲಿ ಸೋರುತ್ತಿದೆ. 14 ಸಾವಿರದಷ್ಟು ಪುಸ್ತಕ ಸಂಗ್ರಹವಿದ್ದು ಮಳೆ ನೀರಿನಿಂದ ಬಹುತೇಕ ಪುಸ್ತಕ ಹಾಳಾಗಿವೆ. ಈ ಗ್ರಂಥಾಲಯದಲ್ಲಿ ಕೇವಲ 4 ಸಾವಿರದಷ್ಟು ಪುಸ್ತಕಗಳು ಉಳಿದಿವೆ. 462 ಸದಸ್ಯರನ್ನು ಹೊಂದಿರುವ ಈ ಗ್ರಂಥಾಲಯದಲ್ಲಿ 6-18 ವರ್ಷದೊಳಗಿನ 235 ಮಕ್ಕಳು ಸದಸ್ಯತ್ವ ಪಡೆದಿರುವುದು ವಿಶೇಷ. ನವೆಂಬರ್ 14, 2020ರಿಂದ ಓದುವ ಬೆಳಕು ಯೋಜನೆ ಆರಂಭಿಸಿದ್ದು ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸಲು ವಿಶೇಷ ಒತ್ತುಕೊಡಲಾಗಿದೆ.

ಎರಡು ವರ್ಷಗಳ ಹಿಂದೆ ಗ್ರಂಥಾಲಯವನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಸುಪರ್ದಿಗೆ ವಹಿಸಲಾಗಿದೆ. ಗ್ರಂಥಾಲಯ ಸಿಬ್ಬಂದಿ ವೇತನ ಸೇರಿ ಎಲ್ಲ ಸೌಕರ್ಯಗಳನ್ನು ಗ್ರಾಮಪಂಚಾಯಿತಿಯೇ ನೋಡಿಕೊಳ್ಳಲಿದೆ. ನಾವೇನಿದ್ದರೂ ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡಬಹುದು. ಸರೋಜಮ್ಮ, ಉಪನಿರ್ದೇಶಕಿ, ಜಿಲ್ಲಾ ಗ್ರಂಥಾಲಯ ಇಲಾಖೆ