ಹಾಸನ: ಭವಿಷ್ಯದ ಭಾರತದ ಅಭಿವೃದ್ಧಿಯಲ್ಲಿ ಯುವ ಜನತೆಯ ಪಾತ್ರ ತುಂಬಾ ಮುಖ್ಯ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಕೆ.ಹರೀಶ್ ಅಭಿಪ್ರಾಯಪಟ್ಟರು.
ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗಂಧದ ಕೋಠಿ, ಹಾಸನ ಸಾಂಸ್ಕೃತಿಕ ಯುವಕರ ಸಂಘ, ವಾಲ್ಮೀಕಿ ಮಹಿಳಾ ಸಾಂಸ್ಕೃತಿಕ ಕಲಾ ಸಂಸ್ಥೆಯಿಂದ ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ನೆರೆಹೊರೆಯ ಯುವ ಸಂಸತ್ತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವ ಜನತೆ ಚಿಕ್ಕ, ಚಿಕ್ಕ ಆಸೆಗಳಿಗೆ ದೊಡ್ಡ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಅತಿ ಹೆಚ್ಚು ಯುವಕರನ್ನು ಹೊಂದಿರುವ ಭಾರತ ಮುಂದೊಂದು ದಿನ ತಾಂತ್ರಿಕ ಕ್ಷೇತ್ರದಲ್ಲಿ ಮುಂದೆ ಹೋಗುತ್ತದೆ ಎಂದರು.
ಎವಿಕೆ ಕಾಲೇಜಿನ ಉಪನ್ಯಾಸಕ ಯತೀಶ್ವರ್ ಮಾತನಾಡಿ, ವಿಜ್ಞಾನ, ಸಾಹಿತ್ಯ, ಕ್ರೀಡೆ, ತಾಂತ್ರಿಕತೆಯಲ್ಲಿ ಇಂದಿನ ಯುವ ಜನತೆ ಹೆಚ್ಚು ತೊಡಗಿಸಿಕೊಳ್ಳುವ ಮೂಲಕ ವಿಶ್ವದಲ್ಲಿ ತನ್ನದೇ ಛಾಪು ಮೂಡಿಸುವ ಮೂಲಕ ಭಾರತ ವಿಶ್ವ ಮಟ್ಟದಲ್ಲಿ ಹೆಸರು ಮಾಡಿದೆ ಎಂದು ಹೇಳಿದರು.
ಡಾ.ಸಾವಿತ್ರಿ ಮಾತನಾಡಿ, ಮಹಿಳೆ ಕಲಿತರೆ ಇಡೀ ಕುಟುಂಬವೇ ಸುಖಿಯಾಗುತ್ತಿರುತ್ತದೆ. ಪುರುಷನಷ್ಟೇ ಮಹಿಳೆಗೂ ಸಮಾನ ಸ್ಥಾನಮಾನಗಳಿಂದ ಸಂವಿಧಾನಾತ್ಮಕವಾಗಿ ಬಳಸಿಕೊಂಡು ಮುಂದೆ ಬರಬೇಕೆಂದು ತಿಳಿಸಿದರು.
ಪ್ರಾಂಶುಪಾಲ ಪ್ರೊ.ಡಿ.ಕೆ.ಮಂಜಯ್ಯ ಮಾತನಾಡಿ, ಆಧುನಿಕತೆ ಮತ್ತು ತಂತ್ರಜ್ಞಾನಗಳು ಬೆಳೆದಂತೆಲ್ಲ ಯುವ ಜನತೆ ಮಾನವೀಯ ಮೌಲ್ಯಗಳನ್ನು ಮರೆತು ಹಣದ ಹಿಂದೆ ಹೋಗುತ್ತಿರುವುದು ದುರ್ದೈವ. ಹೆತ್ತ ತಂದೆ, ತಾಯಿಗಳಿಗೆ ಗುರು, ಹಿರಿಯರಿಗೆ ಗೌರವ ಕೊಡುವ ಮೂಲಕ ಅನುಭವವನ್ನು ಬಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಖ್ಯಾತ ಜನಪದ ಕಲಾವಿದ ಗ್ಯಾರಂಟಿ ರಾಮಣ್ಣ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಿ.ಟಿ.ಮಾನವ, ಉಪನ್ಯಾಸಕರು ಹಾಜರಿದ್ದರು.