ಜಿಲ್ಲೆ

ದೇಶದ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ಮುಖ್ಯ: ಫ್ರೋ.ರಾಘವ

ಮಡಿಕೇರಿ: ದೇಶದ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ಬಹಳ ಮುಖ್ಯ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಫ್ರೋ.ರಾಘವ.ಬಿ ಹೇಳಿದರು.

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಎಸ್‌ಎಸ್‌ಎಸ್ ಘಟಕಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಲೋಗೋ ಅನಾವರಣಗೊಳಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

೧೯೬೯ರಲ್ಲಿ ಎನ್‌ಎಸ್‌ಎಸ್ ಆರಂಭವಾಯಿತು. ಅಂದಿನಿಂದ ಇಂದಿನವರೆಗೆ ರಾಷ್ಟ್ರ ನಿರ್ಮಾಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪಾತ್ರ ಬಹಳ ಮುಖ್ಯವಾಗಿದೆ. ದೇಶದ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ಬಹಳ ಮುಖ್ಯ. ಇಂತಹ ಯುವಜನತೆಗೆ ಎನ್‌ಎಸ್ ಎಸ್ ಬಹಳಾ ಮುಖ್ಯವಾದ ವೇದಿಕೆಯಾಗಿದೆ. ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಬಹಳಾ ಸಹಕಾರಿಯಾಗಿರುವ ಎನ್‌ಎಸ್‌ಎಸ್, ಅದೆಷ್ಟೋ ನಾಯಕರನ್ನು ರಾಷ್ಟ್ರಕ್ಕೆ ನೀಡಿದೆ. ನನಗಲ್ಲ ನಿನಗೆ ಎನ್ನುವ ಧ್ಯೇಯವನ್ನಿಟ್ಟುಕೊಂಡು ಸಮಾಜವನ್ನು ತಿದ್ದುವುದರೊಂದಿಗೆ, ಯಾವುದೇ ಆಕಾಂಕ್ಷೆಯನ್ನಿಟ್ಟುಕೊಳ್ಳದೆ ಇತರರಿಗಾಗಿ ಬದುಕುವುದನ್ನು ಬದುಕಿಗೆ ಧಾರೆಯೆರೆಯುವ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರ ಕುರಿತು ಹೆಮ್ಮೆಯೆನಿಸುತ್ತದೆ ಎಂದರು.

ಸೂಕ್ಷ್ಮಾಣು ಜೀವ ವಿಜ್ಞಾನ ವಿಭಾಗದ ಸಹಾಯಕ ಪ್ರಾದ್ಯಾಪಕಿ ಡಾ.ಪಿ.ಎ.ಗೀತಾಂಜಲಿ ಮಾತನಾಡಿ, ಎನ್‌ಎಸ್‌ಎಸ್ ನಾನು ಸೇವೆಗೆ ಸಿದ್ಧ ಎನ್ನುವುದನ್ನು ಸೂಚಿಸುತ್ತದೆ. ಕಡೆಂಗೋಡ್ಲು ಶಂಕರಭಟ್ಟ ಅವರು ಬರೆದ ಸಾಲುಗಳಾದ ಅನುಭವವು ಸವಿಯಲ್ಲ, ಅದರ ನೆನಪೇ ಸವಿಯು ಎನ್ನುವುದನ್ನು ಉಲ್ಲೇಖಿಸಿದ ಅವರು, ರಾಷ್ಟ್ರೀಯ ಸೇವಾ ಯೋಜನೆಯ ಅವಕಾಶಗಳನ್ನು ಸದಾ ಬಳಸಿಕೊಳ್ಳಬೇಕು. ಇದರಿಂದ ನಮ್ಮ ಜೀವನದಲ್ಲಿ ಹೆಚ್ಚು ಅವಕಾಶಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾದ್ಯಾಪಕಿ ಡಾ.ಎ.ಎನ್.ಗಾಯತ್ರಿ ಮಾತನಾಡಿ, ನಿಸ್ವಾರ್ಥವಾಗಿ ನಾವು ಸಮಾಜಕ್ಕೆ ಸೇವೆ ಸಲ್ಲಿಸುತ್ತೇವೆ ಎನ್ನುವುದಾದರೆ ಅದು ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಿಂದ ಸಾಧ್ಯ. ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಎನ್‌ಎಸ್‌ಎಸ್ ಸ್ವಯಂ ಸೇವಕರು ಮುಂದಾಗಬೇಕು. ಸಮಾಜದ ಸಮಸ್ಯೆಗಳನ್ನು ನಿವಾರಿಸುವಲ್ಲಿ ತಮ್ಮ ಪ್ರಯತ್ನಗಳನ್ನು ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಸ್ವಯಂ ಸೇವಕರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಘಟಕಗಳ ಯೋಜನಾಧಿಕಾರಿ ಡಾ.ಕೆ.ಶೈಲಶ್ರೀ, ಎನ್‌ಎಸ್‌ಎಸ್ ಘಟಕಗಳ ಯೋಜನಾಧಿಕಾರಿ ಅಲೋಕ್, ಕಾಲೇಜಿನ ಬೋಧಕ ಸಿಬ್ಬಂದಿಗಳಾದ ಡಾ.ಪ್ರದೀಪ್ ಭಂಡಾರಿ, ಡಾ.ಸೌಮ್ಯಶ್ರಿ, ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು, ನಿರ್ದೇಶಕ ಚರಣ್ ಬಲ್ಯದ, ವಿದ್ಯಾರ್ಥಿ ನಾಯಕರಾದ ಟಿ.ವಿ.ವರ್ಷ, ಬಿ.ವಿ.ಮಧುಸೂದನ್, ಮನೋಜ್, ಕೆ.ಟಿ.ವರ್ಷ ಹಾಜರಿದ್ದರು.