ಸೇಂಟ್ ಆನ್ಸ್ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನದ ಆಚರಿಸಲಾಯಿತು. ತೃಪ್ತಿ ಬೋಪಣ್ಣ , ಅರ್ಜುನ್, ಶಾಂತಿ ಭೂಷಣ್ ಇದ್ದರು. 
ಜಿಲ್ಲೆ

ಗುರಿ ಸಾಕಾರಗೊಳ್ಳಲು ಯುವಕರ ಪಾತ್ರ ಮುಖ್ಯ

ವಿರಾಜಪೇಟೆ: ಸ್ವಾಮಿ ವಿವೇಕಾನಂದರು ಯುವಕರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದರು. ಇಂದು ರಾಷ್ಟ್ರವು ವಿಕಸಿತ ಭಾರತದ ಪರಿಕಲ್ಪನೆಯನ್ನು ಹೊಂದಿದ್ದು ಆರ್ಥಿಕ ಅಭಿವೃದ್ಧಿ ಆಗುವತ್ತ ಗುರಿ ಮುಟ್ಟುತ್ತಿದೆ. ಆ ಗುರಿ ಸಾಕಾರಗೊಳ್ಳಲು ಯುವಕರ ಪಾತ್ರ ಅತಿ ಮುಖ್ಯ ಎಂದು ಪಟ್ಟಣದ ಸೇಂಟ್ ಆನ್ಸ್ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ತಿಳಿಸಿದರು.

ಪಟ್ಟಣದ ಸೇಂಟ್ ಆನ್ಸ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕ ಹಾಗೂ ಎಂ.ಕಾಂ. ಸ್ನಾತಕೋತ್ತರ ವಿಭಾಗದ ವತಿಯಿಂದ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಗುರಿ ಮಟ್ಟಬೇಕೆಂದರೆ ಆರಂಭದಿಂದಲೇ ಪ್ರಯತ್ನಗಳನ್ನು ಮಾಡಬೇಕು. ಆಗ ಯಶಸ್ಸು ಕಾಣಲು ಸಾಧ್ಯ. ಯುವಕರು ತನ್ನದೇ ಆದ ಕೊಡುಗೆಯನ್ನು ರಾಷ್ಟ್ರಕ್ಕೆ ನೀಡಬೇಕು ಎಂದರು.

ಕಾಲೇಜಿನ ಎನ್‌ಎಸ್‌ಎಸ್ ಘಟಕದ ಅಧಿಕಾರಿ ಬಿ.ಎನ್. ಶಾಂತಿಭೂಷಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಅರ್ಜುನ್, ವಿಲೀನ ಗೋನ್ಸಾಲ್ವೇಸ್, ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಹಾಗೂ ಎಂ.ಕಾಂ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು. ಎಂ.ಕಾಂ. ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ಹಾಗೂ ಸ್ವಾಮಿ ವಿವೇಕಾನಂದರ ಸಂದೇಶವನ್ನು ನೀಡುವ ಕಿರು ಪ್ರದರ್ಶನ ನಡೆಯಿತು.

ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಬಿ.ಡಿ.ಹೇಮಾ ಮಾತನಾಡಿ, ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಮಾರ್ಗದರ್ಶನ ಹಾಗೂ ತತ್ವಗಳನ್ನು ಅನುಸರಿಸುವುದರ ಮೂಲಕ ದ್ಯೇಯ ಉದ್ದೇಶಗಳನ್ನು ಸಾಕಾರಗೊಳಿಸಿ ರಾಷ್ಟ್ರದ ಪ್ರಗತಿಗೆ ಶ್ರಮಿಸಬೇಕೆಂದು ತಿಳಿಸಿದರು.

ಸಂತ ಅನ್ನಮ್ಮ ಪಿಯು ಕಾಲೇಜಿನ ಪ್ರಾಂಶುಪಾಲ ಹಾಗೂ ಪದವಿ ಕಾಲೇಜಿನ ವ್ಯವಸ್ಥಾಪಕ ರೆ.ಫಾ.ಮದಲೈ ಮುತ್ತು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.