ಇಂಡಿ: ದೇಶದ ಅಭಿವೃದ್ಧಿಗೆ ಕಾರ್ಮಿಕರ ಕೊಡುಗೆ ಅಪಾರ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಕೋಟೆಪ್ಪ ಕಾಂಬಳೆ ಹೇಳಿದರು.
ಗುರುವಾರ ಪಟ್ಟಣದ ಕ್ಷೇತ್ರಶಿಕ್ಷಣಾಧಿಕಾರಿಗಳ ಗುರುಭವನ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಮಿಕರಿಗೆ ಸಂಬಂಧಿಸಿದ ವಿವಿಧ ಕಾಯ್ದೆಗಳು ಹಾಗೂ ಸರ್ಕಾರಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತ ತಾಲೂಕುಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಮಿಕರು ಕೆಲಸ ಮಾಡದಿದ್ದರೆ ದೇಶದ ಅಭಿವೃದ್ಧಿ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂದರು.
ಕಾರ್ಮಿಕ ನಿರೀಕ್ಷಕಿ ಜಗದೇವಿ ಸಜ್ಜನ ಮಾತನಾಡಿ, ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಸೌಲಭ್ಯಗಳು ಇವೆ. ಪಿಂಚಣಿ ಸೌಲಭ್ಯ, ದುರ್ಬಲತೆ ಪಿಂಚಣಿ, ಟೂಲ್ ಕಿಟ್ ಸೌಲಭ್ಯ, ಹೆರಿಗೆ ಸೌಲಭ್ಯ, ಅಂತ್ಯಕ್ರಿಯೆ ವೆಚ್ಚ, ಶೈಕ್ಷಣಿಕ ಸಹಾಯಧನ, ವೈದ್ಯಕೀಯ ಸಹಾಯಧನ, ಅಪಘಾತ ಪರಿಹಾರ, ಮದುವೆ ಧನ ಸಹಾಯ, ತಾಯಿ ಮತ್ತು ಸಹಾಯ ಹಸ್ತ ಎನ್ನುವಂತ ವಿವಿಧ ಸೌಲಭ್ಯ ಸಿಗುತ್ತವೆ. ಕಾರ್ಮಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಮಿಕ ಅಧಿಕಾರಿ ಉಮಾಶ್ರೀ ಕೋಳಿ, ಕಾರ್ಮಿಕ ನಿರೀಕ್ಷಕ ದತ್ತು ದೇವರಮನಿ, ಕಾರ್ಮಿಕ ಸಂಘದ ಅಧ್ಯಕ್ಷ ಎಲ್.ಡಿ.ನದಾ ಮಾತನಾಡಿದರು.
ದಿವಾನಿ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಸುನೀಲಕುಮಾರ, ಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕಿ ನೀಲಮ್ಮ ಖೇಡಗಿ , ಗ್ರೇಡ್-2 ತಹಸೀಲ್ದಾರ್ ಧನಪಾಲಶೆಟ್ಟಿ ದೇವೂರ, ವಕೀಲರ ಸಂಘದ ಅಧ್ಯಕ್ಷ ಎಸ್.ಆರ್.ಬಿರಾದಾರ, ಮಲ್ಲಿಕಾರ್ಜುನ ಬಗಲಿ, ಸುಭಾಸಚಂದ್ರ ಟೋನಿ, ರೋಹಿತ ಗೊಂದಳಿ, ಪ್ರಶಾಂತ ಅರ್ಜನಾಳ, ಸಿದ್ದು ಹಾವಳಗಿ ಇದ್ದರು.