ಜಿಲ್ಲೆ

ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಅಪಾರ

ಚನ್ನರಾಯಪಟ್ಟಣ: ಕೃಷಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವಲ್ಲಿ ಮಹಿಳೆಯರ ಶ್ರಮ ಮತ್ತು ಸಾಧನೆ ಅಪಾರ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಶ್ಲಾಘಿಸಿದರು.


ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಭಾನುವಾರ ಕೃಷಿ ಇಲಾಖೆ ವತಿಯಿಂದ 2023-24 ನೇ ಸಾಲಿನ ಆತ್ಮ ಯೋಜನೆಯಡಿ ಆಯೋಜಿಸಿದ್ದ ಮಹಿಳಾ ಕಿಸಾನ್ ದಿವಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನೆ ಕೆಲಸವನ್ನು ನಿರ್ವಹಿಸುವುದರ ಜತೆಗೆ ಕೃಷಿ ಚಟುವಟಿಕೆಗಳಲ್ಲೂ ಮಹಿಳೆಯರು ಪುರುಷರಂತೆ ಕೆಲಸ ಮಾಡುತ್ತಾರೆ. ಕೃಷಿ ಕ್ಷೇತ್ರದಲ್ಲಿ ತೋಟಗಾರಿಕೆ, ಪುಷ್ಪೋದ್ಯಮ, ಹೈನುಗಾರಿಕೆ, ಮೇಕೆ, ಕುರಿ, ಕೋಳಿ, ಜೇನು ಸಾಕಣಿಕೆಯಂತಹ ಉಪಕಸಬುಗಳಲ್ಲಿ ಮಹಿಳೆಯರ ಪಾತ್ರ ಬಹು ಮುಖ್ಯವಾದದ್ದು. ನಮ್ಮ ದೇಶ ಹಾಲು ಉತ್ಪಾದನೆಯಲ್ಲಿ ಗಣನೀಯ ಸ್ಥಾನ ಪಡೆದಿದೆ ಎಂದರೆ ಅದರ ಶ್ರೇಯಸ್ಸು ಮಹಿಳೆಯರಿಗೆ ಸಲ್ಲುತ್ತದೆ ಎಂದು ಪ್ರಶಂಸಿಸಿದರು.


ಹವಾಮಾನ ವೈಪರೀತ್ಯ ಕಾರಣದಿಂದ ರೈತರು ಪದೇಪದೆ ಬೆಳೆ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಹಾಗೂ ಅಪಾಯ ಸಂಭಾವ್ಯತೆ ಕಡಿಮೆ ಮಾಡಲು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಸಹಕಾರಿ. ತಾಲೂಕಿನಲ್ಲಿ ತೀವ್ರ ಬರದಿಂದ 25,500 ಹೆಕ್ಟೇರ್ ಕೃಷಿ ಭೂಮಿಯಲ್ಲಿ ರಾಗಿ, ಮುಸುಕಿನ ಜೋಳ ಸೇರಿದಂತೆ ಇತರ ಬೆಳೆ ಹಾನಿಯಾಗಿದೆ. ಹೆಸರು ನೋಂದಾಯಿಸಿಕೊಂಡಿರುವ 30,071 ರೈತರು ಬೆಳೆ ವಿಮೆ ಪ್ರಯೋಜನ ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದರು.


ಸಾವಯವ ಮಹಿಳಾ ಕೃಷಿಕರಾದ ಹೂವಿನಹಳ್ಳಿಯ ವಿ.ಆರ್.ಕುಮಾರಿ ರಮೇಶ್ ಹಾಗೂ ವಡ್ಡರಹಳ್ಳಿಯ ಪಾರ್ವತಮ್ಮ ಶಿವರಾಜು ಅವರನ್ನು ಸನ್ಮಾನಿಸಲಾಯಿತು. ಸಹಾಯಕ ಕೃಷಿ ನಿರ್ದೇಶಕ ಜನಾರ್ಧನ್, ದಿನೇಶ್, ಪ್ರಗತಿಪರ ರೈತ ಎಚ್.ಎಂ.ರಮೇಶ್ ಇದ್ದರು.