ಜಿಲ್ಲೆ

ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದು

ನಂಜನಗೂಡು: ವಿದ್ಯಾರ್ಥಿಗಳು ದಿನದ 24 ಗಂಟೆಯಲ್ಲಿ 8 ಗಂಟೆಗೂ ಅಧಿಕ ಕಾಲ ಶಾಲೆಯ ಆವರಣದಲ್ಲಿ ಶಿಕ್ಷಕರ ಜತೆ ಇರುತ್ತಾರೆ. ಪಾಲಕರಿಗಿಂತ ಹೆಚ್ಚು ಜವಾಬ್ದಾರಿ ಶಿಕ್ಷಕರ ಮೇಲಿರುತ್ತದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.


ಅವರು ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ನಂಜನಗೂಡು ತಾಲೂಕು ವತಿಯಿಂದ ನಗರದ ಕಮಲಮ್ಮ ಗುರುಮಲ್ಲಪ್ಪ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಾನು ಇಂದು ಶಾಸಕನಾಗಿ, ಜವಾಬ್ದಾರಿಯುತ ಸ್ಥಾನದಲ್ಲಿ ನಿಂತು ಮಾತನಾಡಲು ಬಾಲ್ಯದಿಂದ ಉನ್ನತ ವ್ಯಾಸಂಗ ಮಾಡುವವರೆಗೂ ನನ್ನನ್ನು ತಿದ್ದಿ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಈ ನಿಟ್ಟಿನಲ್ಲಿ ನನ್ನ ಎಲ್ಲ ಶಿಕ್ಷಕರುಗಳಿಗೆ ನಾನು ಚಿರಋಣಿಯಾಗಿರುತ್ತೇನೆ ಎಂದು ತಿಳಿಸಿದರಲ್ಲದೇ ಹಲವು ವರ್ಷಗಳಿಂದ ಸುಸಜ್ಜಿತ ಗುರುಭವನದ ಬೇಡಿಕೆಯಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಮಾತನಾಡಿ, ಅನುದಾನ ಬಿಡುಗಡೆ ಮಾಡಿಸಿ, ಶೀಘ್ರದಲ್ಲೇ ಸುಸಜ್ಜಿತವಾದ ಅತ್ಯಾಧುನಿಕ ಗುರುಭವನವನ್ನು ನಿರ್ಮಿಸುವ ಭರವಸೆ ನೀಡಿದರು.


ರಾಮ್ ಮೋಹನ್ ಮುಖ್ಯ ಭಾಷಣ ಮಾಡಿ, ಪ್ರಪಂಚದಲ್ಲಿ ಅತಿಗಣ್ಯವ್ಯಕ್ತಿ ಎಂದರೆ ಅದು ಸೈನಿಕ, ರೈತ, ಶಿಕ್ಷಕ ಮಾತ್ರ. ಶಿಕ್ಷಕನಿಲ್ಲದೇ ಯಾವ ವಿದ್ಯಾರ್ಥಿಯೂ ಮುಂದೆ ಬರಲು ಸಾಧ್ಯವಾಗುವುದಿಲ್ಲ. ಶಿಕ್ಷಕನೇ ವಿದ್ಯಾರ್ಥಿ ಜೀವನದ ಅಡಿಪಾಯ. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಉತ್ತಮ ಶಿಕ್ಷಕರಾಗಿದ್ದು, ಎಲ್ಲರೂ ಪ್ರೀತಿಸುವಂತಹ ವ್ಯಕ್ತಿಯಾಗಿದ್ದರು. ಅವರ ಪಾಠ ಪ್ರವಚನವನ್ನು ಕೇಳಲು ವಿದ್ಯಾರ್ಥಿಗಳು ಮುಗಿಬೀಳುತ್ತಿದ್ದರು. ಅಂತಹ ಮಹಾನ್ ವ್ಯಕ್ತಿಯ ಜನ್ಮದಿನದಂದು ನಾವು ಶಿಕ್ಷಕ ದಿನಾಚರಣೆಯನ್ನು ಆಚರಿಸುತ್ತಿರುವುದು ಶಿಕ್ಷಕರ ಪಾಲಿಗೆ ವರದಾನ ಎಂದರು.


ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭಾಧ್ಯಕ್ಷ ಶ್ರೀಕಂಠಸ್ವಾಮಿ, ಉಪಾಧ್ಯಕ್ಷ ರಿಹಾನಾಬಾನು, ಮುಖ್ಯ ಭಾಷಣಕಾರ ಇ.ಕೆ.ರಾಮ್‌ಮೋಹನ್, ಬಿಇಒ ಎಂ.ಮಹೇಶ್, ಸೋಮಶೇಖರ, ಸ್ವಾಮಿ, ಸೋಮೇಗೌಡ, ಧರ್ಮರತ್ನಾಕರ, ಸ್ವಾಮೇಶ್, ಮುದ್ದುಮಾದೇಗೌಡ, ರಂಗಸ್ವಾಮಿ, ಪ್ರಸನ್ನ, ರಾಜೇಂದ್ರ, ಅನುರಾಧ, ಕಾರಯ್ಯ, ನೀಲಿಸಿದ್ದು ಇತರರಿದ್ದರು.