ಹುಬ್ಬಳ್ಳಿ: ನೇರ ಹಾಗೂ ಸ್ಪಷ್ಟ ನಿಲುವಿನ ಚುಟುಕು ಸಾಹಿತ್ಯದಿಂದ ಮಾತ್ರ ಮುರಿದ ಮನಸ್ಸು ಕಟ್ಟುವ ಕಾರ್ಯ ಸಾಧ್ಯವಾಗಲಿದೆ ಎಂದು ಮೂರುಸಾವಿರಮಠ ಶ್ರೀ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಇಲ್ಲಿಯ ಮೂರುಸಾವಿರಮಠ ಡಾ. ಮೂಜಗಂ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಲೇಖಕಿಯರ ರಾಜ್ಯದ ಮಟ್ಟದ 9ನೇ ಸಮ್ಮೇಳನದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಬಸವಾದಿ ಶರಣರು ಕಂಡ ಕನಸನ್ನು ಕಚುಸಾಪ ಅಕ್ಷರ ಶಹ ಪಾಲಿಸುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಅಂತಾರಾಜ್ಯ ಮಟ್ಟದಲ್ಲಿ ತನ್ನ ಛಾಪು ಮೂಡಿಸಿದೆ ಎಂದರು. ಕಚುಸಾಪ ನನಗೆ ಪ್ರೀತಿಯಿಂದ ನೀಡಿದ ಭಾವೈಕ್ಯತಾ ಮೂರ್ತಿ ಪ್ರಶಸ್ತಿಯನ್ನು ಹೃದಯತುಂಬಿ ಸ್ವೀಕರಿಸುವುದಾಗಿ ನುಡಿದರು.
ಸರ್ವಾಧ್ಯಕ್ಷೆ ಡಾ. ಹನುಮಾಕ್ಷಿ ಗೋಗಿ ಮಾತನಾಡಿ, ಬೃಹತ್ ಗೃಂಥಗಳ ಸಾರವನ್ನು ಚುಟುಕು ಸಾಹಿತ್ಯ ನಾಲ್ಕು ಸಾಲುಗಳಲ್ಲಿ ಬಿಂಬಿಸುವ ಮೂಲಕ ಜನಪರ ವಿಶ್ವಾಸವನ್ನು ಗಳಿಸಿದೆ ಎಂದರು.
ಶಿಕ್ಷಣ ತಜ್ಞ ಡಾ.ಆರ್.ಎಂ. ಕುಬೇರಪ್ಪ, ಮಾಜಿ ಸಂಸದ ಪ್ರೊ.ಐ.ಜಿ. ಸನದಿ, ಗಣ್ಯರಾದ ಡಾ. ಶಾಂತಣ್ಣ ಕಡಿವಾಲ, ಡಾ. ಶರಣಪ್ಪ ಕೊಟಗಿ, ವಿ.ಜಿ. ಪಾಟೀಲ ಮಾತನಾಡಿದರು. ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಯಶ್ರೀ ಗೌರವ ಸಮ್ಮಾನ ನೀಡಿ ಮಂಜುಳಾ ಕುಲಕರ್ಣಿ, ವಿಶಾಲಾಕ್ಷಿ ಪ್ರಶಸ್ತಿ ನೀಡಿ ಪ್ರಭಾವತಿ ಮುತ್ತಿನ, ಚುಟುಕು ಚಿನ್ಮಯಿ ಪ್ರಶಸ್ತಿ ನೀಡಿ ಸರ್ವಾಧ್ಯಕ್ಷೆ ಡಾ. ಗೋಗಿ ದಂಪತಿಯನ್ನು ಸನ್ಮಾನಿಸಲಾಯಿತು.
ಆರಂಭದಲ್ಲಿ ಪಂಚಮಿ ಹಾಡಿನ ಸ್ಪರ್ಧೆ ಜರುಗಿತು. ಏಳು ತಂಡಗಳು ಭಾಗವಹಿಸಿದ್ದವು.
ಪದ್ಮಜಾ ಉಮರ್ಜಿ ಅಧ್ಯಕ್ಷತೆಯಲ್ಲಿ ಹಿರಿಯ ಚಿಂತಕಿ ರೂಪಾ ಜೋಶಿ ಮಹಿಳಾ ಶೋಷಣೆ-ಜಾಗೃತಿ, ಶಿರಸಿಯ ದಾಕ್ಷಾಯಿಣಿ ಪಿ.ಸಿ. ಮಹಿಳಾ ಆಂದೋಲನ, ಡಾ. ರತ್ನಾ ಐರಸಂಗ ಕನ್ನಡ ಮಾಧ್ಯಮ ಹೊಣೆಗಾರಿಕೆ ಕುರಿತು ಉಪನ್ಯಾಸ ನೀಡಿದರು.
ಸಂಜೆ ಶಿರಸಿಯ ಗಣಪತಿ ಭಟ್ಟರು ವರ್ಗಾಸರ ಅಧ್ಯಕ್ಷತೆಯಲ್ಲಿ ಚುಟುಕು ಗೋಷ್ಠಿ ಜರುಗಿತು.
ಹಾಸನದ ಕವಿ ಕುಮಾರ ಚಲುವಾದಿ ಆಶಯ ಭಾಷಣ ಮಾಡಿದರು.
ಕುಮುದಾ ದೇಶಪಾಂಡೆ, ವಿಜಯಲಕ್ಷ್ಮೀ ಕೊಳ್ಳಿ, ರೇಣುಕಾ ದೇಶಪಾಂಡೆ ಸೇರಿದಂತೆ ಹತ್ತು ಜನರು ಕವನ ಓದಿದರು.
ರಾಜ್ಯ ಸಮಿತಿಯ ಎಸ್.ಐ. ನೇಕಾರ ನಿರ್ಣಯ ಮಂಡಿಸಿ, ಪ್ರಾಥಮಿಕ ಹಂತದಿಂದ ಉಚ್ಛ ಶಿಕ್ಷಣದವರೆಗೆ ಖಾಸಗಿ ಸೇರಿದಂತೆ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಹೆಣ್ಣುಮಕ್ಕಳಿಗೆ ಸರ್ಕಾರ ಉಚಿತ ಶಿಕ್ಷಣ ನೀಡುವಂತೆ ಆಗ್ರಹಿಸಿದರು.