ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ವಿದ್ಯೆಗೆ ಮಾತ್ರವಲ್ಲ, ಸ್ವಾತಂತ್ರ‍್ಯ ಹೋರಾಟದಲ್ಲಿ ಹಲವು ಮಹನೀಯರು ಸೇವೆ ಸಲ್ಲಿಸಲು ಅವಕಾಶ ನೀಡಿದ ನಾಡು. ವಿಶೇಷವಾಗಿ ಆರ್.ಎಸ್. ಹುಕ್ಕೇರಿಕರ ಅವರ ಸೇವೆ ಸ್ಮರಣೀಯವಾಗಿದೆ ಎಂದು ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಹೇಳಿದರು.
ನಗರದ ಜೆ.ಎಸ್.ಎಸ್. ಸಂಸ್ಥೆಯ ಆರ್.ಎಸ್. ಹುಕ್ಕೇರಿಕರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಉತ್ಸವ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ `ಸ್ವಾತಂತ್ರ‍್ಯ ಹೋರಾಟದಲ್ಲಿ ಆರ್.ಎಸ್. ಹುಕ್ಕೇರಿಕರ ಪಾತ್ರ' ಕುರಿತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರ ಮಾತನಾಡಿದರು.
ಹುಕ್ಕೇರಿಕರ ನಾಡು- ನುಡಿಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಹಲವು ಬಾರಿ ಜೈಲುವಾಸ ಅನುಭವಿಸಿದರೂ ಅವರ ಸ್ವಾತಂತ್ರ‍್ಯ ಹೋರಾಟದ ಕಿಚ್ಚು ಕಡಿಮೆಯಾಗಲಿಲ್ಲ. ನಾಡಿನುದ್ದಕ್ಕೂ ಸ್ವಾತಂತ್ರ‍್ಯ ಚಳವಳಿಗಳ ಬಗ್ಗೆ ಜಾಗೃತಿ ಮೂಡಿಸುವಂತಹ ಕಾರ್ಯ ಮಾಡಿದ್ದಾರೆ ಎಂದರು.
ಇತಿಹಾಸ ವಿಭಾಗದ ಉಪನ್ಯಾಸಕ ವಿನಾಯಕ ಶೇಠ ಮಾತನಾಡಿ, ಹುಕ್ಕೇರಿಕರ ಧಾರವಾಡದಿಂದ ಬಳ್ಳಾರಿಯವರೆಗೆ ಕಾಲ್ನಡಿಗೆಯಲ್ಲಿ ಸಂಚರಿಸಿ, ಯುವ ಪೀಳಿಗೆಯನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದ್ದರು. ಮಹಾನ್ ವ್ಯಕ್ತಿಯ ಜೀವನ ನಮಗೆ ಆದರ್ಶಪ್ರಾಯ ಎಂದರು.
ಪ್ರಭು ಕುಂದರಗಿ ಹಾಗೂ ಕಲಾ ತಂಡ ದೇಶಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿತು. ಪ್ರಾಚಾರ್ಯೆ ಭಾರತಿ ಶಾನಭಾಗ, ಪ್ರಕಾಶ ಸುಣಗಾರ, ಜ್ಯೋತಿ ಮಾಚಕ, ಇತರರಿದ್ದರು. ಡಾ. ಸಂಗಯ್ಯ ಶಿವಪ್ಪಯ್ಯನಮಠ ನಿರೂಪಿಸಿದರು. ಸರ್ವಮಂಗಲಾ ಕರೆಗೌಡರ ವಂದಿಸಿದರು.