ಬಬಲೇಶ್ವರ ತಾಲೂಕಿನ ಕೃಷ್ಣಾನಗರದ ನಂದಿ ಅಂತಾರಾಷ್ಟ್ರೀಯ ವಸತಿ ಶಾಲೆ ವಾರ್ಷಿಕ ಸ್ನೇಹ-ಸಮ್ಮೇಳನವನ್ನು ಗಣ್ಯರು ಉದ್ಘಾಟಿಸಿದರು. ಪ್ರೊ. ಬಿ.ಕೆ. ತುಳಸಿಮಾಲ, ಸಂಗಮೇಶ ಬಬಲೇಶ್ವರ, ಬಸನಗೌಡ ಪಾಟೀಲ ಮತ್ತಿತರರಿದ್ದಾರೆ. 
ಜಿಲ್ಲೆ

ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಮುಖ್ಯ

ವಿಜಯಪುರ: ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಾಲೆಯ ಶಿಕ್ಷಕರಷ್ಟೇ ಜವಾಬ್ದಾರಿಯನ್ನು ಪಾಲಕರೂ ವಹಿಸಬೇಕು ಎಂದು ಮಹಿಳಾ ವಿವಿ ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲ ಸಲಹೆ ನೀಡಿದರು.

ಬಬಲೇಶ್ವರ ತಾಲೂಕಿನ ಕೃಷ್ಣಾನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಆಶ್ರಯದಡಿಯ ಶ್ರೀ ಬಿ.ಟಿ. ಪಾಟೀಲ ಮೆಮೋರಿಯಲ್, ನಂದಿ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 13ನೇ ವಾರ್ಷಿಕ ಸ್ನೇಹ-ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ನೈತಿಕ ಬೆಳವಣಿಗೆಯಲ್ಲಿ ಶಿಕ್ಷಕರು ಹಾಗೂ ಪಾಲಕರು ಸಮನಾಗಿ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ನಂದಿ ಶಿಕ್ಷಣ ಸಂಸ್ಥೆ ಬೆಳೆದು ಬಂದ ದಾರಿ ಹಾಗೂ ಶಿಕ್ಷಣದ ಮಹತ್ವದ ಕುರಿತು ಮಾತನಾಡಿದರು.

ಎನ್‌ಐಆರ್‌ಎಸ್ ಅಧ್ಯಕ್ಷ ಬಸನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರಾಚಾರ್ಯ ಅನಿಲ್‌ಕುಮಾರ ಬೆನಕಟ್ಟಿ ಶಾಲಾ ವರದಿ ವಾಚಿಸಿದರು. ಶಾಲಾ ಕಾರ್ಯದರ್ಶಿ ಎ.ಪಿ. ಬಿದರಿ ನಿರ್ವಹಿಸಿದರು.

ಕಾರ್ಖಾನೆ ಉಪಾಧ್ಯಕ್ಷ ಎ.ಪಿ. ಲೆಂಕೆಣ್ಣವರ, ನಿರ್ದೇಶಕರಾದ ಎಚ್.ಎಸ್. ಕೋರಡ್ಡಿ, ಐ.ಬಿ. ನ್ಯಾಮಗೌಡರ, ಎಸ್.ಜಿ. ಪಾಟೀಲ, ಎಸ್.ಕೆ. ನಿಡೋಣಿ, ಜಿ.ಕೆ. ಕೋನಪ್ಪನವರ, ಎಸ್.ಆರ್. ಪಾಟೀಲ, ಜಿ.ಡಿ. ಅಂಗಡಿ, ಶಾಲಾ ನಿರ್ದೇಶಕಿ ಎಸ್.ಕೆ. ಭಾಗ್ಯಶ್ರೀ, ಕಾರ್ಖಾನೆ ಹಿರಿಯ ವೈದ್ಯಾಧಿಕಾರಿ ಎಚ್.ಜಿ. ಬಿದರಿ ಮತ್ತಿತರರಿದ್ದರು.