ಕೆ.ಆರ್.ನಗರ: ಮಕ್ಕಳ ಗುಣಮಟ್ಟದ ಕಲಿಕೆ ಹಾಗೂ ಶಿಕ್ಷಣ ಸಂಸ್ಥೆ ಪ್ರಗತಿಗೆ ಶಿಕ್ಷಕರಷ್ಟೇ ಪಾಲಕರ ಪಾತ್ರ ಮತ್ತು ಸಹಕಾರ ಬಹುಮುಖ್ಯವಾಗಿದೆ ಎಂದು ವಾಸವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಲ್.ಆರ್.ಅಮರ್‌ನಾಥ್ ಹೇಳಿದರು.
ಪಟ್ಟಣದ ಬಜಾರ್ ರಸ್ತೆಯಲ್ಲಿರುವ ವಾಸವಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಇತ್ತೀಚೆಗೆ ನಡೆದ ಪಾಲಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಮಕ್ಕಳ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಆಗ ಸಂಸ್ಥೆಗೆ ಹೆಸರು ಮತ್ತು ಕೀರ್ತಿ ಸಿಗಲಿದೆ. ಇದರಿಂದ ಸಂಸ್ಥೆಯ ಏಳಿಗೆಯೂ ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟರು.
ನಮ್ಮ ಸಂಸ್ಥೆಯು ಉತ್ತಮ ಶಿಕ್ಷಕ ಸಿಬ್ಬಂದಿ ಹೊಂದುವ ಮೂಲಕ ಮಕ್ಕಳಿಗೆ ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಇನ್ನಿತರ ರಂಗಗಳಲ್ಲಿ ತರಬೇತಿ ನೀಡಿ ಅವರ ಬುದ್ಧ್ದಿಮತ್ತೆಯೊಂದಿಗೆ ಇತರ ಕೌಶಲಗಳ ಬೆಳವಣಿಗೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಉದಯಕುಮಾರ್, ಸಂಸ್ಥೆಯ ಉಪಾಧ್ಯಕ್ಷ ಬಿ.ಸಿ.ರಾಘವೇಂದ್ರ, ಕಾರ್ಯದರ್ಶಿ ಸುನೀತಾ ಅಮರ್‌ನಾಥ್, ಮುಖ್ಯಶಿಕ್ಷಕಿ ಕೆ.ಬಿ.ವೀಣಾ ಮತ್ತಿತರರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.
ಸಂಸ್ಥೆ ನಿರ್ದೆಶಕ ಪಿ.ಆರ್.ವಿಶ್ವನಾಥಶೆಟ್ಟಿ, ಜ್ಯೋತಿ ಎಸ್.ಮೂರ್ತಿ, ಪಿ.ಕೆ.ಸರಳಾ ಮತ್ತು ಶಿಕ್ಷಕ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು, ಪಾಲಕರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ವರ್ಣರಂಜಿತ ನೃತ್ಯಪ್ರದರ್ಶನ, ಕಿರುನಾಟಕ, ಗಾಯನ, ಜಾನಪದ ನೃತ್ಯ, ವೀರಗಾಸೆ, ಕಂಸಾಳೆ ಸೇರಿದಂತೆ ಇನ್ನಿತರ ಪ್ರದರ್ಶನ ಏರ್ಪಡಿಸಲಾಗಿತ್ತು.