ಜಿಲ್ಲೆ

ಉತ್ತಮ ಸಮಾಜ ನಿರ್ವಿುಸುವಲ್ಲಿ ಪತ್ರಿಕೆಗಳ ಪಾತ್ರ ಹಿರಿದು

ಕಲಘಟಗಿ: ವಿದ್ಯಾರ್ಥಿಗಳು ಮನದಾಳದಲ್ಲಿ ಯಾವ ವಿಚಾರಧಾರೆಗಳನ್ನು ಹೆಚ್ಚೆಚ್ಚು ಮೆಲುಕು ಹಾಕುತ್ತಾರೋ ಅದು ಅವರ ವೃತ್ತಿಯಾಗಿ ಬದಲಾವಣೆಗೊಳ್ಳುತ್ತಿದ್ದು, ಉತ್ತಮ ಸಮಾಜ ನಿರ್ವಿುಸುವಲ್ಲಿ ಪತ್ರಿಕೆಗಳ ಪಾತ್ರವೂ ಹಿರಿದಾಗಿದೆ. ಹೀಗಾಗಿ ಎಲ್ಲರೂ ವಿದ್ಯಾರ್ಥಿ-ಉದ್ಯೋಗ ಮಿತ್ರ ಪತ್ರಿಕೆಯನ್ನು ತಪ್ಪದೆ ಅಭ್ಯಸಿಸುವುದರೊಂದಿಗೆ ಉತ್ತಮ ಅಂಕ ಪಡೆಯಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಡಾ. ಮಹೇಶ ತಿಪ್ಪಣ್ಣವರ ಹೇಳಿದರು.

ತಾಲೂಕಿನ ಮಿಶ್ರಿಕೋಟಿ ಗ್ರಾಮದ ಶಿವಪ್ಪಣ್ಣ ಜಿಗಳೂರು ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ವಿದ್ಯಾರ್ಥಿಗಳ ಕೈಯಲ್ಲಿ ಮೊಬೈಲ್​ಫೋನ್ ಬೇಡ ಮನೆಗೊಂದು ಪತ್ರಿಕೆ ಇರಲಿ’ ಎಂಬ ವಿಷಯದಡಿ ಶಿವಪ್ಪಣ್ಣ ಜಿಗಳೂರು ಶಾಲೆ ಹಾಗೂ ಬಿ.ಆರ್. ಅಂಬೇಡ್ಕರ್ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ‘ವಿಜಯವಾಣಿ ವಿದ್ಯಾರ್ಥಿ-ಉದ್ಯೋಗ ಮಿತ್ರ ಪತ್ರಿಕೆ’ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಿಪಂ ಮಾಜಿ ಸದಸ್ಯ ಐ.ಸಿ. ಗೋಕುಲ ಮಾತನಾಡಿ, ಶಿಕ್ಷಕ ವೃಂದ ಪಠ್ಯದ ಎಲ್ಲ ಪಾಠಗಳನ್ನು ತಿಳಿಸಿದರೂ ವಿದ್ಯಾರ್ಥಿಮಿತ್ರ ಓದಿನಿಂದ ವಿಶೇಷ ಜ್ಞಾನಾರ್ಜನೆ ಪಡೆಯಬಹುದು. ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ಅಧ್ಯಯನದಲ್ಲಿ ತೊಡಗಿಸಿಕೊಂಡು ಪ್ರತಿಭಾನ್ವಿತರಾಗಬೇಕು ಎಂದರು.

ಸಿ.ಇ.ಎಸ್.ಎಸ್.ಜೆ. ಕಾಲೇಜ್ ಪ್ರಾಚಾರ್ಯ ಎಸ್.ಎಂ. ಮರಲಿಂಗಣ್ಣವರ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಒಂದು ಪ್ರಮುಖ ಹಂತವಾಗಿದೆ. ವಿದ್ಯಾರ್ಥಿಗಳ ಮುಂದಿನ ವಿದ್ಯಾರ್ಜನೆ ಸ್ಪರ್ಧಾ ಮನೋಭಾವನೆಯಿಂದ ಕೂಡಿರಬೇಕು. ಅದಕ್ಕೆ ಪೂರಕವಾದ ಹಲವಾರು ವಿಷಯಗಳು ವಿದ್ಯಾರ್ಥಿಮಿತ್ರದಲ್ಲಿ ಅಡಕವಾಗಿದ್ದು, ತನ್ಮಯತೆಯಿಂದ ಅಧ್ಯಯನಶೀಲರಾದಾಗ ಉತ್ತಮ ಅಂಕ ಗಳಿಸಬಹುದು. ಅಲ್ಲದೆ, ಮುಂದಿನ ಜೀವನದಲ್ಲಿ ಭದ್ರ ಬುನಾದಿಯ ಪ್ರಥಮ ಮೆಟ್ಟಿಲು ಸುಭದ್ರಗೊಳಿಸಿಕೊಳ್ಳಬೇಕು ಎಂದರು.

ಶಾಲಾ ನಿರ್ದೇಶಕ ಶಿವಾನಂದ ಹುರಕಡ್ಲಿ, ನೀಲಮ್ಮ ಶಿಂತ್ರೆ, ಯಲ್ಲಪ್ಪ ನರೇಂದ್ರ, ಶಾಲಾ ಮುಖ್ಯೋಪಾಧ್ಯಾಯ ಸಿ.ಬಿ. ಗುಡಿಮನಿ, ಎನ್.ಎ. ಕಿಳ್ಳಿಕೇತರ, ಎಂ.ಬಿ. ಹುಲಮನಿ, ಎಂ.ಕೆ. ಅರ್ಕಸಾಲಿ, ಎಂ.ಜಿ. ಪಶುಪಾತಿಹಾಳ, ಎನ್.ಎಂ. ಬಳಿಗೇರ, ಜೆ.ವಿ. ಕುನ್ನೂರ, ಚೈತನ್ಯ ಕೋಟಿಮಠ, ರಾಧಾ ಸವಣೂರ, ವಿನಾಯಕ ಸೋನಾರ, ಆನಂದ ಇಜಾರಿ, ಇತರರು ಉಪಸ್ಥಿತರಿದ್ದರು.