ಜಿಲ್ಲೆ

ಸೇನೆಗೆ ಅಧಿಕಾರಿಗಳನ್ನು ನೀಡುವಲ್ಲಿ ಸೈನಿಕ ಶಾಲೆಗಳ ಪಾತ್ರ ದೊಡ್ಡದು

ಕುಶಾಲನಗರ: ದೇಶದ ಸೇನೆಗೆ ಅಧಿಕಾರಗಳನ್ನು ನೀಡುವಲ್ಲಿ ಸೈನಿಕ ಶಾಲೆಗಳ ಪಾತ್ರ ಮಹತ್ವವಾದದು ಎಂದು ಕೂಡಿಗೆ ಕೊಡಗು ಸೈನಿಕ ಶಾಲೆ ಪ್ರಾಂಶುಪಾಲ ಕರ್ನಲ್ ಅಮರ್‌ಜಿತ್ ಸಿಂಗ್ ಹೇಳಿದರು.

ಇಲ್ಲಿನ ಫಾತಿಮಾ ಕಾನ್ವೆಂಟ್-ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬುಧವಾರ ಆಯೋಜಿಸಿದ್ದ 2023-24ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಚಿಕ್ಕ ವಯಸ್ಸಿನಲ್ಲೇ ಮಕ್ಕಳನ್ನು ಸೈನಿಕ ಶಾಲೆಗೆ ಸೇರ್ಪಡೆ ಮಾಡಲಾಗುತ್ತದೆ. ಇಲ್ಲಿ ಗುಣಮಟ್ಟದೊಂದಿಗೆ ಶಿಸ್ತಿನ ಶಿಕ್ಷಣ ನೀಡಲಾಗುತ್ತದೆ. ಈ ಶಿಕ್ಷಣ ಸಂಸ್ಥೆ ಸೇನೆಗೆ ಅಧಿಕಾರಿಗಳನ್ನು ಮಾತ್ರವಲ್ಲದೆ ದೇಶಕ್ಕೆ ಉತ್ತಮ ಪ್ರಜೆಗಳನ್ನೂ ನೀಡುತ್ತಿದೆ ಎಂದರು.

ಸೋಮವಾರಪೇಟೆ ಬಿಇಒ ಎಸ್.ಭಾಗ್ಯಮ್ಮ ಮಾತನಾಡಿ, ಮಕ್ಕಳನ್ನು ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಇಂದಿನ ದಿನಗಳಲ್ಲಿ ಮಕ್ಕಳ ಕಡೆಗೆ ಹೆಚ್ಚಿನ ಸಮಯ ಕೊಡಲು ಆಗುತ್ತಿಲ್ಲ. ಮಕ್ಕಳಿಗೆ ಮನೆಯಲ್ಲೇ ಹಿತವಚನ ಹೇಳಬೇಕು. ಜತೆಗೆ ಮನೆಯಲ್ಲೇ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸುವುದು ಪಾಲಕರ ಜವಾಬ್ದಾರಿ ಎಂದು ಹೇಳಿದರು.

ಮೈಸೂರಿನ ಟೆರೆಷಿಯನ್ ಕಾಲೇಜು ಆಡಳಿತಾಧಿಕಾರಿ ಡಾ.ರೋಹಿಣಿ ಮಾತನಾಡಿ, ಮೌಲ್ಯಾಧಾರಿತ ಶಿಕ್ಷಣ ಮಕ್ಕಳ ಸಮೃದ್ಧ ಜೀವನಕ್ಕೆ ಅತ್ಯುತ್ತಮ ಅಡಿಪಾಯ ಇದ್ದಂತೆ. ಶಿಕ್ಷಕರು ಮಕ್ಕಳ ಪಾಲಿನ ಯುಪಿಎಸ್‌ಗಳಂತೆ ಕೆಲಸ ಮಾಡಬೇಕು. ಏನು ಚಿಂತಿಸಬೇಕು ಎನ್ನುವುದನ್ನು ಶಿಕ್ಷಕರು ಮಕ್ಕಳಿಗೆ ಹೇಳಿಕೊಡುವ ಬದಲು ಹೇಗೆ ಚಿಂತಿಸಬೇಕು ಎನ್ನುವುದನ್ನು ಹೇಳಿಕೊಡಬೇಕು. ಕೃತಕ ಬುದ್ಧಿಮತ್ತೆ, ರೊಬಾಟಿಕ್ ತಂತ್ರಜ್ಞಾನ, ಯಾಂತ್ರಿಕೃತ ಜೀವನ 21ನೇ ಶತಮಾನದ ಸವಾಲಾಗಿದೆ ಎಂದರು.

ಕುಶಾಲನಗರ ಸೆಂಟ್ ಸೆಬಾಸ್ಟಿಯನ್ ಚರ್ಚ್ ಫಾದರ್ ರೆ.ಫಾ. ಮಾರ್ಟಿನ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ.ಸದಾಶಿವಯ್ಯ ಎಸ್. ಪಲ್ಲೇದ್, ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಪುಷ್ಪಾ, ಫಾತಿಮ ವಿದ್ಯಾಸಂಸ್ಥೆಯ ಸಿಸ್ಟರ್ ಸ್ಪಂದನಾ, ಸಿಸ್ಟರ್ ಜಸ್ವಿನಾ, ಸಿಸ್ಟರ್ ತೆರೆಸಾ, ತಪೋವನ ಸಂಸ್ಥೆ ಫಾದರ್ ಫಾ.ಲಾರೆನ್ಸ್, ಮರಡಿಯೂರು ಚರ್ಚ ಫಾದರ್ ಫಾ.ಜೋಸೆಫ್ ಮರಿಯಾ ವೇದಿಕೆಯಲ್ಲಿದ್ದರು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಇದೇ ವೇಳೆ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.