ಶಿವಮೊಗ್ಗ: ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಕೃಷಿ ವಿಜ್ಞಾನ ಕೇಂದ್ರಗಳ ಪಾತ್ರ ಪ್ರಮುಖವಾಗಿದ್ದು, ನೂತನವಾಗಿ ಆರಂಭವಾಗುತ್ತಿರುವ ಕಿಸಾನ್ ಸಮೃದ್ಧಿ ಬ್ರಾಂಡಿಂಗ್ ಒಂದು ಮೈಲಿಗಲ್ಲಾಗಲಿದೆ ಎಂದು ಕೆವಿಕೆ ಅಟಾರಿ ವಲಯ 11ರ ನಿರ್ದೇಶಕ ವಿ.ವೆಂಕಟ ಸುಬ್ರಮಣಿಯನ್ ಹೇಳಿದರು.
ನವಿಲೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ಮೂರು ದಿನಗಳ ವೈವಿಧ್ಯಮಯ ಹಣ್ಣುಗಳು ಮತ್ತು ಆಹಾರ ಮೇಳದಲ್ಲಿ ರಜತ ಸಂಭ್ರಮ ಸ್ಮರಣಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕೃಷಿ, ಹಣ್ಣು ಮೇಳವು ಕೃಷಿ ಕ್ಷೇತ್ರ ಸಬಲೀಕರಣಗೊಳಿಸುವಲ್ಲಿ ಉತ್ತಮ ಕಾರ್ಯವಾಗಿದೆ ಎಂದರು.
ಸ್ವಾತಂತ್ರ್ಯದ ವೇಳೆ ದೇಶ ಆಹಾರ ಕೊರತೆಯಲ್ಲಿತ್ತು. ಇದೀಗ ಆಹಾರ ಉತ್ಪನ್ನಗಳಲ್ಲಿ ಸಮೃದ್ಧಿ ಸಾಧಿಸಿದ್ದು, ಆಹಾರ ಉತ್ಪನ್ನಗಳ ರಫ್ತಿನಲ್ಲೇ ಮೊದಲ ಸ್ಥಾನದಲ್ಲಿದೆ. ಎಲ್ಲೆಡೆ ಕಿಸಾನ್ ಸಮೃದ್ಧಿ ಕೇಂದ್ರಗಳಿವೆ. ರೈತರು ಆಹಾರ, ಪೋಷಕಾಂಶಗಳ ಭದ್ರತೆ ನೀಡುತ್ತಿದ್ದಾರೆ. ವಿಶ್ವಕ್ಕೇ ಆಹಾರ ನೀಡುತ್ತಿರುವ ನಾವು ಸೂಪರ್ ಪವರ್ ಆಗಿ ಹೊರಹೊಮ್ಮುತ್ತಿದ್ದೇವೆ ಎಂದರು.
ಶಾಸಕ, ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಜಿ.ಎಚ್.ಶ್ರೀನಿವಾಸ ಮಾತನಾಡಿ, ಕೆವಿಕೆ 2 ಲಕ್ಷ ಜನರಿಗೆ ನೇರ ತರಬೇತಿ ನೀಡಿತ್ತಿದ್ದು, ಪರೋಕ್ಷವಾಗಿ 35 ಜನರಿಗೆ ಸಹಕಾರಿಯಾಗಿದೆ. ಬೀಜ ಉತ್ಪಾದನೆ, ತಾಂತ್ರಿಕತೆಯಲ್ಲಿ ಉತ್ತಮ ಸಾಧನೆ ಮಾಡಲಾಗಿದೆ ಎಂದರು.
ಶಾಸಕಿ ಶಾರದಾ ಪೂರ್ಯಾನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಎಂಎಲ್‌ಸಿ ಬಲ್ಕೀಶ್ ಬಾನು, ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಕೃಷಿ ಸಮಾಜದ ಅಧ್ಯಕ್ಷ ಎಚ್.ಎನ್.ನಾಗರಾಜ್, ಡಾ. ಪಿ.ಕೆ.ಬಸವರಾಜ್, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್, ರಾಯಚೂರು ವಿವಿಯ ಡಾ. ಎನ್.ಹನುಮಂತಪ್ಪ, ವಿಶ್ರಾಂತ ಕುಲಪತಿ ಡಾ. ಪಿ.ನಾರಾಯಣಸ್ವಾಮಿ, ಡಾ. ದಿನಕರ್, ಡಾ.ರವಿ ಭಟ್, ಕೆವಿಕೆ ಮುಖ್ಯಸ್ಥ ಡಾ. ಸುನೀಲ್, ವಿಸ್ತರಣಾಧಿಕಾರಿ ಡಾ. ಜಿ.ಕೆ.ಗಿರಿಜೇಶ್, ರೈತ ನಾಯಕ ಕೆ.ಟಿ.ಗಂಗಾಧರ್ ಪಾಲ್ಗೊಂಡಿದ್ದರು.