ಜಿಲ್ಲೆ

ಪತ್ರಕರ್ತರು, ವಿತರಕರ ಪಾತ್ರ ಮಹತ್ವದ್ದು

ಅರಸೀಕೆರೆ ಗ್ರಾಮಾಂತರ: ಪತ್ರಕರ್ತ ಸುದ್ದಿಯನ್ನು ಹೆಕ್ಕಿ ತಂದರೆ, ಪತ್ರಿಕಾ ವಿತರಕರು ಆ ಸುದ್ದಿಯನ್ನು ಓದುಗರ ಮನೆ ಬಾಗಿಲಿಗೆ ತಲುಪಿಸುತ್ತಾರೆ. ಸಮಾಜವನ್ನು ಜಾಗೃತಿಗೊಳಿಸುವಲ್ಲಿ ಈ ಇಬ್ಬರ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ ಎಂದು ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.

ಇಂದು ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಅಂಗವಾಗಿ ಶ್ರೀ ಮಠಕ್ಕೆ ಭೇಟಿ ನೀಡಿದ್ದ ವಿತರಕರಿಗೆ ಟಿ ಶರ್ಟ್‌ಗಳನ್ನು ವಿತರಿಸಿ, ಅವರನ್ನು ಆಶೀರ್ವದಿಸಿದ ನಂತರ ಸ್ವಾಮೀಜಿ ಮಾತನಾಡಿದರು.

ಯಾವ ಕೆಲಸವೂ ಕೀಳಲ್ಲ, ಮೇಲಲ್ಲ, ಎಲ್ಲ ಕೆಲಸಗಳೂ ಸಹ ಗೌರವಯುತವಾದವುಗಳೇ ಆಗಿರುತ್ತವೆ. ನಮ್ಮ ಬದುಕು ಹಾಗೂ ಸಮಾಜಕ್ಕೆ ಒಳಿತಾಗುವ ಯಾವುದೇ ಕೆಲಸ ಮಾಡಿದರೂ ಅದನ್ನು ಜನ ಮಾತ್ರವಲ್ಲ, ಜನಾರ್ದನನೂ ಮೆಚ್ಚುವಂತಿರುತ್ತದೆ ಎಂದರು.

ಪತ್ರಿಕಾ ವಿತರಕರು ಮುಂಜಾನೆ ಮನೆ ಮನೆಗೆ ತೆರಳಿ ಸುದ್ದಿ ಮುಟ್ಟಿಸುವ ಪಕ್ಷಿಗಳಿದ್ದಂತೆ, ಇಂಥ ಪಕ್ಷಿಗಳು ಭವಿಷ್ಯದಲ್ಲಿ ತಮಗಿಷ್ಟವಾಗಿ ಎತ್ತರದ ಮಟ್ಟದಲ್ಲಿ ಹಾರಾಡಲಿ, ಇದಕ್ಕೆ ಬೇಕಾದ ವ್ಯವಸ್ಥೆ ಕಲ್ಪಿಸಿಕೊಡುವ ಜವಾಬ್ದಾರಿಯನ್ನು ಸರ್ಕಾರ ಹಾಗೂ ಸಂಘ- ಸಂಸ್ಥೆಗಳು ಮಾಡಲಿ ಎಂದು ಆಶಯ ವ್ಯಕ್ತಪಡಿಸಿದರು.

ಇದೇ ದಿನ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ತಾಲೂಕು ಪತ್ರಿಕಾ ವಿತರಕರ ಸಂಘದ ಸಂಯುಕ್ತ ಆಶ್ರಯದಲ್ಲಿ ನಗರದ ಪಿಪಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮವನ್ನು ಕೇಕ್ ಕತ್ತರಿಸುವ ಮೂಲಕ ಉದ್ಯಮಿ ರಾಘು ಉದ್ಘಾಟಿಸಿದರು.

ನಂತರ ಮಾತನಾಡಿ, ಮಳೆ-ಚಳಿ ಎನ್ನದೆ ಮುಂಜಾನೆ ನಮ್ಮ ಸುತ್ತಮುತ್ತಲಿನ ಸುದ್ದಿ ವಿಚಾರ ಮಾತ್ರವಲ್ಲದೆ ದೇಶ ವಿದೇಶಗಳ ಸುದ್ದಿಯನ್ನು ಮುಟ್ಟಿಸುವ ಮೂಲಕ ಸಮಾಜದ ಬೆಳವಣಿಗೆ ಪರಿಚಯಿಸಿಕೊಡುವ ವಿತರಕರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.

ದೇಶದ ಮಾಜಿ ರಾಷ್ಟ್ರಪತಿ ದಿ.ಅಬ್ದುಲ್ ಕಲಾಂ ಅವರಂತಹ ಮಹಾನ್ ಚೇತನ ಸಹ, ಮುಂಜಾನೆ ಪತ್ರಿಕೆ ಹಂಚುತ್ತಿದ್ದರು ಎಂಬುದನ್ನು ವಿತರಕರು ಅರಿಯಬೇಕು. ಅವರಂತೆ ತಾವೂ ಸಹ ಉತ್ತಮ ವಿದ್ಯಾಭ್ಯಾಸ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯಿರಿ ಎಂದರು.

ಹಿರಿಯ ವಿತರಕರಾದ ನಾಗರಾಜರಾವ್, ಹಾಸನ ಸರ್ಕಲ್ ಕುಮಾರಣ್ಣ, ಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಕಸಾಪ ತಾಲೂಕು ಮಾಜಿ ಅಧ್ಯಕ್ಷ ಬಿ.ಪರಮೇಶ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿದರು. ಈ ವೇಳೆ ಉಪಾಧ್ಯಕ್ಷ ಸಿದ್ದೇಶ್, ಮಾಜಿ ಅಧ್ಯಕ್ಷರಾದ ರಾಮಚಂದ್ರು, ಆನಂದ್ ಟಿ. ಕಣಕಟ್ಟೆ ಕುಮಾರ್, ಕಾರ್ಯದರ್ಶಿಗಳಾದ ರಂಗನಾಥ್, ಮೋಹನ್, ಮಾಜಿ ಕಾರ್ಯದರ್ಶಿಗಳಾದ ನವೀನ್, ಶೇಖರ್ ಸಂಕೋಡನಹಳ್ಳಿ, ಪತ್ರಕತರಾದ ಟಿ.ಎ.ಸ್ವಾಮಿ, ವಿಜಯಕುಮಾರ್, ನಾಗರಾಜಶೆಟ್ಟಿ, ರಮೇಶ್, ಬಸವರಾಜು, ಜೀವನ್ ಕುಮಾರ್, ಸುರೇಶ್, ಹರಿಪ್ರಸಾದ್ ಹಾಗೂ ವಿತರಕರ ಸಂಘದ ತಾಲೂಕು ಅಧ್ಯಕ್ಷ ಕೃಷ್ಣಮೂರ್ತಿ, ಕಾರ್ಯದರ್ಶಿ ನಾಗೇಂದ್ರ ಇದ್ದರು.