ಮೈಸೂರು: ನಾಡು ಮತ್ತು ನುಡಿಯ ಕಟ್ಟುವ ಪ್ರಕ್ರಿಯೆಯಲ್ಲಿ ಹಲವು ಮಹತ್ವದ ಕೊಡುಗೆ ನೀಡಿರುವ ಈಡಿಗ ಸಮುದಾಯದ ಪಾತ್ರ ಮಹತ್ವದ್ದಾಗಿದೆ ಎಂದು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಪದ್ಮಾ ಶೇಖರ್ ಬಣ್ಣಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸ್ಪಂದನ ಸಾಂಸ್ಕೃತಿಕ ಪರಿಷತ್ತು, ಕದಂಬ ಕಲಾಪೀಠ ಹಾಗೂ ಉದಯಗಿರಿ ಕನ್ನಡ ಸಂಘದಿಂದ ನಗರದ ಇಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಜಯಾ ಸುರೇಶ್ ಸಂಪಾದಕತ್ವದ ‘ಈಡಿಗ ಜನಾಂಗದ ಮರೆಯಲಾಗದ ಮಹನೀಯರು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸೇಂದಿ ತಯಾರಿಕೆಯು ಈಡಿಗರ ಮೂಲ ಕಸುಬಾದರೂ ಅಷ್ಟಕ್ಕೇ ಅವರ ಸೇವೆ ಸೀಮಿತವಾಗಿರಲಿಲ್ಲ. ಸೇನೆಯನ್ನೂ ಒಳಗೊಂಡು ಅನೇಕ ವಿಭಾಗಗಳಲ್ಲಿ ಅವರು ತೊಡಗಿಸಿಕೊಂಡಿದ್ದರು ಎನ್ನುವುದನ್ನು ಹಲವು ಶಾಸನಗಳು ದಾಖಲಿಸಿವೆ ಎಂದರು.
ಆಧುನಿಕ ಕರ್ನಾಟಕ ಕಟ್ಟುವಲ್ಲೂ ಈ ಸಮುದಾಯ ಮುಂಚೂಣಿಯಲ್ಲಿದ್ದು, ಮಾಧ್ಯಮ ಹಾಗೂ ರಾಜಕೀಯ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದೆ. ಈಡಿಗ ಸಮುದಾಯದ ಕುರಿತು ಅಲ್ಲಲ್ಲಿ ಬಿಡಿ ಬಿಡಿ ಲೇಖನಗಳು ಬಂದಿವೆಯಾದರೂ ಸಮಗ್ರ ಕೃತಿಯ ಕೊರತೆ ಇತ್ತು. ಅದನ್ನು ಈ ಪುಸ್ತಕವು ಭಾಗಶಃ ನೀಗಿಸಿದೆ. ಹೊಸ ಸಂಶೋಧಕರು ಹಾಗೂ ಸಮುದಾಯದ ಕೈಪಿಡಿ ಆಗಿದೆ. ಲೇಖಕಿ ಕೇವಲ ಪ್ರಾಥಮಿಕ ಶಿಕ್ಷಣ ಪಡೆದಿದ್ದರೂ ಸಂಶೋಧನೆ ಬಯಸುವ ಶಿಸ್ತಿನ ಪಥದಲ್ಲಿ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಈಡಿಗ ಸಮುದಾಯದ ಪಾತ್ರ ಮಹತ್ವದ್ದಾಗಿದ್ದು, ಈ ಹಿನ್ನೆಲೆಯಲ್ಲಿ ಜನಾಂಗದ ಇತಿಹಾಸ ಮತ್ತು ಸಂಸ್ಕೃತಿ ಅಧ್ಯಯನ ಸಂಶೋಧನೆಗೆ ಅರ್ಹವಾಗಿದೆ ಎಂದರು.
ಪುಸ್ತಕ ಬಿಡುಗಡೆ ಮಾಡಿದ ಹಿರಿಯ ಸಾಹಿತಿ ಪ್ರೊ.ಸಿ.ಪಿ.ಕೃಷ್ಣಕುಮಾರ್ ಮಾತನಾಡಿ, ವಿವಿಧ ಹೆಸರಿನಿಂದ ಕರೆಯಲ್ಪಡುವ ಈಡಿಗರು ದೇಶದಾದ್ಯಂತ ನೆಲೆಸಿದ್ದು, ವಿಶಾಲ ಮನೋಭಾವ ಹೊಂದಿರುವವರಾಗಿದ್ದಾರೆ. ಅನೇಕ ಗಣ್ಯ ಪುರುಷರು, ಮಹನೀಯರು ಈ ಸಮುದಾಯದಿಂದ ಬಂದು ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಸಮುದಾಯದವರಾದ ನಾರಾಯಣ ಗುರುಗಳು ರಕ್ತಸಿಕ್ತ ಇತಿಹಾಸವುಳ್ಳ ಇಡೀ ಕೇರಳವನ್ನು ಪರಿವರ್ತಿಸಿದ ಕ್ರಾಂತಿಕಾರಿ ಸಮಾಜ ಸುಧಾರಕ. ಬಸವಣ್ಣ ಮತ್ತು ಕುವೆಂಪು ಅವರ ಸಾಲಿನಲ್ಲಿ ನಿಲ್ಲುವಂತ ಸಾಂಸ್ಕೃತಿಕ ನಾಯಕ. ಈ ಸಮುದಾಯದವರೇ ಆದ ರಾಜಕುಮಾರ್, ಎಸ್. ಬಂಗಾರಪ್ಪ ಅವರಂತವರು ನಾಡಿನ ಸಂಸ್ಕೃತಿಗೆ ಕೊಟ್ಟ ಕೊಡುಗೆ ಅಪಾರ’ ಎಂದು ನೆನೆದರು.
ಈಡಿಗ ಜನಾಂಗದ ಮರೆಯಲಾಗದ ಮಹನೀಯರು ಕೃತಿಯು ಗಾತ್ರ-ಸೂತ್ರದಲ್ಲಿ, ರೂಪ-ಸ್ವರೂಪದಲ್ಲಿ ಅಪರೂಪದ ಗ್ರಂಥವಾಗಿದ್ದು, ಗಣ್ಯ ಜನಾಂಗವೊಂದರ ಪ್ರಬುದ್ಧ ಅಧ್ಯಯನದ ಸಾಂಸ್ಕೃತಿಕ ಸಂಕಥನವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ. ಸತೀಶ್ ಜವರೇಗೌಡ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಎಚ್.ಕೆ.ಪಾಂಡು, ಕೃತಿಯ ಲೇಖಕಿ ಸುಜಯಾ ಸುರೇ, ಲೇಖಕ ಡಾ.ವೈ.ಡಿ.ರಾಜಣ್ಣ, ಕದಂಬ ಕಲಾ ಪೀಠದ ಅಧ್ಯಕ್ಷ ವಿದ್ಯಾಸಾಗರ ಕದಂಬ, ಉದಯಗಿರಿ ಕನ್ನಡ ಸಂಘದ ಕಾರ್ಯದರ್ಶಿ ಜಯಕುಮಾರ್, ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಪದಾಧಿಕಾರಿಗಳಾದ ಡಾ.ಡಿ.ಕೆ.ಉಷಾ, ಟಿ.ಲೋಕೇಶ್ ಹುಣಸೂರು, ಚಂದ್ರು ಮಂಡ್ಯ ಇತರರು ಇದ್ದರು.